Thursday, 31 December 2020
24. "ಇರುವದೆಲ್ಲವ ಬಿಟ್ಟು, ಇರದಿರುವದರ ಕಡೆಗೆ..." ನಾನು ನನ್ನ ' ಮೊದಲ ಗಳಿಕೆ' ಯ ಕೊಂಚ ಹಣವನ್ನು ಕೈಲಿ ಹಿಡಿದಾಗ ನನಗಿನ್ನೂ ಆಗ ಹತ್ತು ವರ್ಷ ಸಹಿತ ತುಂಬಿರಲಿಲ್ಲ. ಏಕೆ? ಆಶ್ಚರ್ಯವಾಯಿತೇ? ನನಗೂ ಅದೇ ಆಗಿತ್ತು. ಅದರೆ ಆ ಹಣ, ಆ ಗಳಿಗೆ ಕೊಟ್ಟ ಕಣ್ಣಿನ ಮಿಂಚನ್ನು ಇಂದಿನ ಪರ್ಸು ತುಂಬುವ ಪೆನ್ಶನ್ಗೆ ಒಂದು ಬಾರಿ, ಕೇವಲ ಒಂದೇ ಒಂದು ಬಾರಿಯೂ ಕೊಡಲಾಗಿಲ್ಲ ಎಂಬುದು ಹದಿನಾರಾಣೆ ಸತ್ಯ. ಇದು ನಿಮಗೆ ಸುಲಭವಾಗಿ ತಲೆಗಿಳಿದು ಅರ್ಥವಾಗಬೇಕೆಂದರೆ ನಾವೀಗ ಕನ್ನಡದ ಸಿನೆಮಾಗಳಾದ ' ತಿಥಿ' ಸಂಸ್ಕಾರ, ಗುಲಾಬಿ ಟಾಕೀಜ' ' ಭೂತಯ್ಯನ ಮಗ ಅಯ್ಯು' ದಲ್ಲಿದ್ದಂಥ ಹಳ್ಳಿಯೊಂದಕ್ಕೆ ಹೋಗಬೇಕು. ಅದರ ಹೆಸರೇ "ರಟ್ಟೀಹಳ್ಳಿ .' ಬೆಂಗಳೂರಿನ ಒಂದು ಮಾಲ್ ಪ್ರದೇಶ ಇರಬಹುದಾದಷ್ಟು ಜಾಗದಲ್ಲಿ ಇಡೀ ಹಳ್ಳಿ ಮುಗಿಯುತ್ತಿತ್ತು.' ಸಂಸ್ಕಾರ' ಸಿನೆಮಾದ ಪ್ರಾಣೇಶಾಚಾರ್ಯರ ಅಗ್ರಹಾರದಂತೆ ಬ್ರಾಮ್ಹಣರ ಕೇರಿ. ನಮ್ಮಪ್ಪ ಮನೆಯ ಕುಟ್ಟಣೆಯಲ್ಲಿ ಎಲೆ ಅಡಿಕೆ , ಜರದಾ ಕುಟ್ಟಿದರೆ ಕನಿಷ್ಟ ನಾಲ್ಕೈದು ಕೈಗಳು ಕ್ಷಣಾರ್ಧದಲ್ಲಿ ಪಾಲು ಬೇಡುವಷ್ಟು ಮನೆಗಳು ಒಂದಕ್ಕೊಂದು ಸಮೀಪ. ಎಲ್ಲರ ಮನೆಗಳಲ್ಲೂ ಕೂಡು ಕುಟುಂಬ. ಅದರಲ್ಲಿ ಅಡಿಗೆ ಕೆಲಸಕ್ಕೆ ಒಂದು ಅಜ್ಜಿ, ಅತ್ತಿತ್ತ ಅಡ್ಡಾಡಿ ಕೆಲಸ ಮಾಡಲೊಂದು ಅವ್ವ, ಅವರ ಕೈಕೆಳಗೆ ಸಹಾಯಕ್ಕೆ ಅಸಹಾಯಕ ಅಕ್ಕಂದಿರು ಇವರೆಲ್ಲರನ್ನು ದಾಟಿ ಯಾವ ಕೆಲಸವೂ ನಮ್ಮವರೆಗೂ ಎಂದೂ ಬರುತ್ತಿರಲಿಲ್ಲ. ಹೀಗಾಗಿ ಆಟಗಳಲ್ಲಿಯಂತೆ ಮನೆಯಲ್ಲೂ ' ಹಾಲುಂಡಿ' ಗಳು ನಾವು. ಊಟಕ್ಕುಂಟು , ಲೆಕ್ಕಕ್ಕಿಲ್ಲ.. ಸಾಮಾನ್ಯವಾಗಿ ಬಹಳಷ್ಟು ಕಮತದ ಮನೆಗಳು ನಮ್ಮೂರಲ್ಲಿ. ಬಿತ್ತನೆಯ ಸಮಯದಲ್ಲಿ ಬೀಜಕ್ಕಾಗಿ ತೆಗೆದಿಟ್ಟ ಕಾಳುಗಳನ್ನು ಸ್ವಚ್ಛಗೊಳಿಸಿ ಚೀಲಗಳನ್ನು ತುಂಬಿ ಮೊದಲೇ ಬಿತ್ತನೆಗೆ ಸಿದ್ಧವಾಗಿಟ್ಟುಕೊಳ್ಳಬೇಕಿತ್ತು. ಸೇಂಗಾ ಬಿತ್ತನೆಗೆ ನೆಲಗಡಲೆ ( ಸೇಂಗಾ) ಕಾಯಿಗಳನ್ನು ಮೊದಲೇ ಒಡೆದು, ಜೊಳ್ಳು ತೆಗೆದು, ಹುಳುಕು ಕಾಳುಗಳಿದ್ದರೆ ಬೇರ್ಪಡಿಸಿ ತುಂಬುಗಾಳುಗಳನ್ನು ಆರಿಸಿ ಚೀಲ ತುಂಬಬೇಕು. ಇಂಥ ಕೆಲಸಕ್ಕೆ ನಮ್ಮ ವಾನರ ಸೇನೆಯ ಸಮೃದ್ಧ ಬಳಕೆಯಾಗುತ್ತಿತ್ತು. ಮನೆಯಲ್ಲೂ ತಕರಾರು ಇರುತ್ತಿರಲಿಲ್ಲ. ಮೂರು ಕಾರಣಗಳಿಗಾಗಿ. ಮಕ್ಕಳು ಬಿಸಿಲಲ್ಲಿ ಪಿರಿಪಿರಿ ತಿರುಗದೇ ಒಂದು ಕಡೆ ಇರುತ್ತಾರೆ. ಮನೆಯಲ್ಲಿ ಅನವಶ್ಯಕ ಗದ್ದಲ ಗಲಾಟೆಗಳು ತಪ್ಪುತ್ತವೆ. ಗೆಳತಿಯರೊಂದಿಗೆ ಒಟ್ಟಿಗೆ ಇರುವದರಿಂದ ಕಾಳಜಿಗೆ ಕಾರಣವಿಲ್ಲ ಎಂಬ ತಮ್ಮದೇ ಸಕಾರಣೆಗಳಿಂದಾಗಿ ನಮಗೆ ಪೂರ್ತಿ ಸ್ವಾತಂತ್ರ್ಯ ಸಿಗುತ್ತಿತ್ತು. ನಮ್ಮನ್ನು ಒಂದು ಪಡಸಾಲೆಯಲ್ಲಿ ಕೂಡಿಸಿ ನಮ್ಮೆದುರು ಸೇಂಗಾರಾಶಿ ಹಾಕುತ್ತಿದ್ದರು. ಮೊದಲು ಎರಡೂ ಕೈಗಳನ್ನು ಬಳಸಿ,ಕುಕ್ಕಿ ಕುಕ್ಕಿ, ಒಡೆದು ಸಿಪ್ಪೆ ಸಮೇತ ರಾಶಿ ಹಾಕುತ್ತಿದ್ದೆವು. ನಂತರ ಎರಡೂ ಕೈಗಳಿಂದ ತೇಲಿಸಿ ಸಿಪ್ಪೆಗಳನ್ನು ಬೇರ್ಪಡಿಸುವದು, ನಂತರ ಹುಳುಕು ಕಾಳು ,ಜೊಟ್ಟ,( ಪೊಳ್ಳು) ಹಾಗೂ ಸುಕ್ಕು ಹಿಡಿದ ಕಾಳುಗಳನ್ನು ಬೇರ್ಪಡಿಸುವದು, ತುಂಬಿದ ಕಾಳುಗಳನ್ನು ಬೇರ್ಪಡಿಸಿ ಚೀಲ ತುಂಬುವದು. ಎಲ್ಲ ಕೆಲಸಗಳನ್ನೂ ಬೇಸರವಿಲ್ಲದೇ ,ನಗುನಗುತ್ತ,ಇತರರೊಡನೆ ಸ್ಫರ್ಧೆಗಿಳಿದು ಮಾಡುತ್ತಿದ್ದ ಹಾಗೆ ನೆನಪು. ನಡುನಡುವೆ ಸಿಹಿಯಾದ ಚಿಕ್ಕ ಚಿಕ್ಕ ಸುಕ್ಕು ಕಾಳುಗಳನ್ನು ಬಾಯಿಗೆಸೆದುಕೊಳ್ಳುವ ಪುಕ್ಕಟೆ ಸೌಲಭ್ಯ ಬೇರೆ ದಕ್ಕುತ್ತಿತ್ತು .ಒಂದು ಕಾಲುಪಾವಿಗೆ ( ಸೇರು) ಎರಡಾಣೆಯಂತೆ ಸಿಗುತ್ತಿತ್ತು. ನಮ್ಮ ಜೊತೆಗೆ ಆ ಮನೆಯ ಎಲ್ಲರೂ ಸ್ವತಃ ಸೇರುತ್ತಿದ್ದುದರಿಂದ ನಮ್ಮಲ್ಲೂ ಯಾವುದೇ ಕೀಳರಿಮೆ,_(ಅದು ಏನೆಂದು ಗೊತ್ತಿರಲೂ ಇಲ್ಲ, ಆ ಮಾತು ಬೇರೆ_) ಎಂದೂ ಕಾಡಲಿಲ್ಲ. ಶುಕ್ರವಾರ ನಮ್ಮ ಊರ ಸಂತೆ. ಅಂದು, ಒಂದು ,ಕೆಲವೊಮ್ಮೆ ಎರಡು ರೂಪಾಯಿಗಳು ಕೈಸೇರುತ್ತಿದ್ದವು. ಅಂಗೈಯ ಮೇಲಿನ ವಿದ್ಯಾರೇಖೆ, ಧನರೇಖೆ, ಆಯುಷ್ಯ ರೇಖೆಗಳನ್ನೆಲ್ಲ ಮುಚ್ಚಿಕೂತ ಆ ಚಿಲ್ಲರೆ ಪೈಸೆಗಳು ನಮ್ಮ ಕಣ್ಣುಗಳಲ್ಲಿ ತುಂಬುತ್ತಿದ್ದ ಬಣ್ಣಗಳಲ್ಲಿ, ಜಗತ್ತನ್ನೇ ವರ್ಣಮಯವಾಗಿಸ ಬಹುದಿತ್ತು. ಮಧ್ಯಾನ್ಹ ನಮ್ಮ 'ಪಗಾರ ಬಟವಡೆ ' ಯಾದಮೇಲೆ ಗುಂಪುಗೂಡಿ ವಾರದ ಸಂತೆಯಲ್ಲಿ ಅಡ್ಡಾಡಿ budget ಮೀರದಂತೆ ಅದು ಇದು ಖರೀದಿಸಿ ಒಂದು ದಿನದ ರಾಣಿಯಂತೆ( ಏಕ ದಿನ ಕೀ ರಾಣಿ) ಕಳೆದರೆ.ಮುಂಬರುವ ದಿನಗಳ ಕೆಲಸಕ್ಕೆ ಗೊತ್ತಿಲ್ಲದೇ ಕಾಯುತ್ತಿದ್ದುದು ಇನ್ನೂ ಹಸಿ ಹಸಿ ನೆನಪು... ಈಗ ಮನೆಯಲ್ಲಿ ಕುಳಿತು ಎಷ್ಟೋ ಸಾವಿರಗಳ ಪೆನ್ಶನ್ ಎಣಿಸುತ್ತೇವೆ. ಆದರೆ ಕಂಗಳಲ್ಲಿ ಕನಸುಗಳು ಅರಳುವದಿಲ್ಲ. ಹಣ ತುಂಬಿದ ಕೈಗಳಿಗೆ ರವಷ್ಟಾದರೂ ರೋಮಾಂಚನಗೊಳಿಸುವ ಆಕರ್ಷಣೆಯಿಲ್ಲ. ಬದಲಿಗೆ ಇತಿಹಾಸದ ಪುಟ ಸೇರಿದ ಪುಟ್ಟ ಪುಟ್ಟ ತಾಮ್ರದ ಕಾಸುಗಳಿಗಾಗಿ, ಅವು ಕೊಟ್ಟ ಒಂದು ಕಾಲದ ಸುಖದ ಗಳಿಗೆಗಳಿಗಾಗಿ ಮನ ಹಂಬಲಿಸುತ್ತದೆ. 'ಇರುವದೆಲ್ಲವ ಬಿಟ್ಟು ಇರದಿರುವದರ ಕಡೆಗಿನ ' ತುಡಿತ ' ಅಂದರೆ ಇದೇನಾ????
Subscribe to:
Post Comments (Atom)
ನೀನಿನ್ನೂ ಇರಬೇಕಿತ್ತು ಮನೋಜ... ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...
-
'ಹಬ್ಬ'ಗಳೇ 'ಹುಟ್ಟಿದ ದಿನ' ಗಳಾಗುತ್ತಿದ್ದ 'ಕಾಲಮಾನ' ನಮ್ಮದು... ಒಮ್ಮೆ ಒಬ್ಬ ಹಿರಿಯ ಸಾಧಕರಿಗೆ ನೂರು ತುಂಬಿದ ಸಂದರ್ಭದಲ್ಲಿ ...
-
ನಮ್ಮ ಊರು ರಟ್ಟೀಹಳ್ಳಿ. ಇನ್ನೊಬ್ಬ ಅಜ್ಜಿಯ ಊರು ಸರ್ವಜ್ಞನ ಮಾಸೂರು.ಎರಡರ ನಡುವೆ ಕೇವಲ ಐದು ಮೈಲುಗಳಷ್ಟು ಅಂತರ.ಆದರೂ ಒಂದೋ/ಎರಡೋ ಯಾವುದೋ ಊರಿಗೆ ಹೋಗುವ ...
-
ಮೊದಲಿನ ಹತ್ತು ವರ್ಷಗಳು ಅಮ್ಮಾ ಅಪ್ಪನ ಎಂಟು ಜನ ಮಕ್ಕಳಲ್ಲಿ ಒಬ್ಬಳಾಗಿ... ನಂತರದ ಹತ್ತು ವರ್ಷಗಳು ಓರಗೆಯ ಸಖಿಯರನ್ನು ಸೇರಿಕೊಂಡು... ಆಮೇಲಿನ ಹತ್ತು ವರ್ಷಗಳು ಧಾರವಾಡದ...
No comments:
Post a Comment