Thursday, 31 December 2020
24. "ಇರುವದೆಲ್ಲವ ಬಿಟ್ಟು, ಇರದಿರುವದರ ಕಡೆಗೆ..." ನಾನು ನನ್ನ ' ಮೊದಲ ಗಳಿಕೆ' ಯ ಕೊಂಚ ಹಣವನ್ನು ಕೈಲಿ ಹಿಡಿದಾಗ ನನಗಿನ್ನೂ ಆಗ ಹತ್ತು ವರ್ಷ ಸಹಿತ ತುಂಬಿರಲಿಲ್ಲ. ಏಕೆ? ಆಶ್ಚರ್ಯವಾಯಿತೇ? ನನಗೂ ಅದೇ ಆಗಿತ್ತು. ಅದರೆ ಆ ಹಣ, ಆ ಗಳಿಗೆ ಕೊಟ್ಟ ಕಣ್ಣಿನ ಮಿಂಚನ್ನು ಇಂದಿನ ಪರ್ಸು ತುಂಬುವ ಪೆನ್ಶನ್ಗೆ ಒಂದು ಬಾರಿ, ಕೇವಲ ಒಂದೇ ಒಂದು ಬಾರಿಯೂ ಕೊಡಲಾಗಿಲ್ಲ ಎಂಬುದು ಹದಿನಾರಾಣೆ ಸತ್ಯ. ಇದು ನಿಮಗೆ ಸುಲಭವಾಗಿ ತಲೆಗಿಳಿದು ಅರ್ಥವಾಗಬೇಕೆಂದರೆ ನಾವೀಗ ಕನ್ನಡದ ಸಿನೆಮಾಗಳಾದ ' ತಿಥಿ' ಸಂಸ್ಕಾರ, ಗುಲಾಬಿ ಟಾಕೀಜ' ' ಭೂತಯ್ಯನ ಮಗ ಅಯ್ಯು' ದಲ್ಲಿದ್ದಂಥ ಹಳ್ಳಿಯೊಂದಕ್ಕೆ ಹೋಗಬೇಕು. ಅದರ ಹೆಸರೇ "ರಟ್ಟೀಹಳ್ಳಿ .' ಬೆಂಗಳೂರಿನ ಒಂದು ಮಾಲ್ ಪ್ರದೇಶ ಇರಬಹುದಾದಷ್ಟು ಜಾಗದಲ್ಲಿ ಇಡೀ ಹಳ್ಳಿ ಮುಗಿಯುತ್ತಿತ್ತು.' ಸಂಸ್ಕಾರ' ಸಿನೆಮಾದ ಪ್ರಾಣೇಶಾಚಾರ್ಯರ ಅಗ್ರಹಾರದಂತೆ ಬ್ರಾಮ್ಹಣರ ಕೇರಿ. ನಮ್ಮಪ್ಪ ಮನೆಯ ಕುಟ್ಟಣೆಯಲ್ಲಿ ಎಲೆ ಅಡಿಕೆ , ಜರದಾ ಕುಟ್ಟಿದರೆ ಕನಿಷ್ಟ ನಾಲ್ಕೈದು ಕೈಗಳು ಕ್ಷಣಾರ್ಧದಲ್ಲಿ ಪಾಲು ಬೇಡುವಷ್ಟು ಮನೆಗಳು ಒಂದಕ್ಕೊಂದು ಸಮೀಪ. ಎಲ್ಲರ ಮನೆಗಳಲ್ಲೂ ಕೂಡು ಕುಟುಂಬ. ಅದರಲ್ಲಿ ಅಡಿಗೆ ಕೆಲಸಕ್ಕೆ ಒಂದು ಅಜ್ಜಿ, ಅತ್ತಿತ್ತ ಅಡ್ಡಾಡಿ ಕೆಲಸ ಮಾಡಲೊಂದು ಅವ್ವ, ಅವರ ಕೈಕೆಳಗೆ ಸಹಾಯಕ್ಕೆ ಅಸಹಾಯಕ ಅಕ್ಕಂದಿರು ಇವರೆಲ್ಲರನ್ನು ದಾಟಿ ಯಾವ ಕೆಲಸವೂ ನಮ್ಮವರೆಗೂ ಎಂದೂ ಬರುತ್ತಿರಲಿಲ್ಲ. ಹೀಗಾಗಿ ಆಟಗಳಲ್ಲಿಯಂತೆ ಮನೆಯಲ್ಲೂ ' ಹಾಲುಂಡಿ' ಗಳು ನಾವು. ಊಟಕ್ಕುಂಟು , ಲೆಕ್ಕಕ್ಕಿಲ್ಲ.. ಸಾಮಾನ್ಯವಾಗಿ ಬಹಳಷ್ಟು ಕಮತದ ಮನೆಗಳು ನಮ್ಮೂರಲ್ಲಿ. ಬಿತ್ತನೆಯ ಸಮಯದಲ್ಲಿ ಬೀಜಕ್ಕಾಗಿ ತೆಗೆದಿಟ್ಟ ಕಾಳುಗಳನ್ನು ಸ್ವಚ್ಛಗೊಳಿಸಿ ಚೀಲಗಳನ್ನು ತುಂಬಿ ಮೊದಲೇ ಬಿತ್ತನೆಗೆ ಸಿದ್ಧವಾಗಿಟ್ಟುಕೊಳ್ಳಬೇಕಿತ್ತು. ಸೇಂಗಾ ಬಿತ್ತನೆಗೆ ನೆಲಗಡಲೆ ( ಸೇಂಗಾ) ಕಾಯಿಗಳನ್ನು ಮೊದಲೇ ಒಡೆದು, ಜೊಳ್ಳು ತೆಗೆದು, ಹುಳುಕು ಕಾಳುಗಳಿದ್ದರೆ ಬೇರ್ಪಡಿಸಿ ತುಂಬುಗಾಳುಗಳನ್ನು ಆರಿಸಿ ಚೀಲ ತುಂಬಬೇಕು. ಇಂಥ ಕೆಲಸಕ್ಕೆ ನಮ್ಮ ವಾನರ ಸೇನೆಯ ಸಮೃದ್ಧ ಬಳಕೆಯಾಗುತ್ತಿತ್ತು. ಮನೆಯಲ್ಲೂ ತಕರಾರು ಇರುತ್ತಿರಲಿಲ್ಲ. ಮೂರು ಕಾರಣಗಳಿಗಾಗಿ. ಮಕ್ಕಳು ಬಿಸಿಲಲ್ಲಿ ಪಿರಿಪಿರಿ ತಿರುಗದೇ ಒಂದು ಕಡೆ ಇರುತ್ತಾರೆ. ಮನೆಯಲ್ಲಿ ಅನವಶ್ಯಕ ಗದ್ದಲ ಗಲಾಟೆಗಳು ತಪ್ಪುತ್ತವೆ. ಗೆಳತಿಯರೊಂದಿಗೆ ಒಟ್ಟಿಗೆ ಇರುವದರಿಂದ ಕಾಳಜಿಗೆ ಕಾರಣವಿಲ್ಲ ಎಂಬ ತಮ್ಮದೇ ಸಕಾರಣೆಗಳಿಂದಾಗಿ ನಮಗೆ ಪೂರ್ತಿ ಸ್ವಾತಂತ್ರ್ಯ ಸಿಗುತ್ತಿತ್ತು. ನಮ್ಮನ್ನು ಒಂದು ಪಡಸಾಲೆಯಲ್ಲಿ ಕೂಡಿಸಿ ನಮ್ಮೆದುರು ಸೇಂಗಾರಾಶಿ ಹಾಕುತ್ತಿದ್ದರು. ಮೊದಲು ಎರಡೂ ಕೈಗಳನ್ನು ಬಳಸಿ,ಕುಕ್ಕಿ ಕುಕ್ಕಿ, ಒಡೆದು ಸಿಪ್ಪೆ ಸಮೇತ ರಾಶಿ ಹಾಕುತ್ತಿದ್ದೆವು. ನಂತರ ಎರಡೂ ಕೈಗಳಿಂದ ತೇಲಿಸಿ ಸಿಪ್ಪೆಗಳನ್ನು ಬೇರ್ಪಡಿಸುವದು, ನಂತರ ಹುಳುಕು ಕಾಳು ,ಜೊಟ್ಟ,( ಪೊಳ್ಳು) ಹಾಗೂ ಸುಕ್ಕು ಹಿಡಿದ ಕಾಳುಗಳನ್ನು ಬೇರ್ಪಡಿಸುವದು, ತುಂಬಿದ ಕಾಳುಗಳನ್ನು ಬೇರ್ಪಡಿಸಿ ಚೀಲ ತುಂಬುವದು. ಎಲ್ಲ ಕೆಲಸಗಳನ್ನೂ ಬೇಸರವಿಲ್ಲದೇ ,ನಗುನಗುತ್ತ,ಇತರರೊಡನೆ ಸ್ಫರ್ಧೆಗಿಳಿದು ಮಾಡುತ್ತಿದ್ದ ಹಾಗೆ ನೆನಪು. ನಡುನಡುವೆ ಸಿಹಿಯಾದ ಚಿಕ್ಕ ಚಿಕ್ಕ ಸುಕ್ಕು ಕಾಳುಗಳನ್ನು ಬಾಯಿಗೆಸೆದುಕೊಳ್ಳುವ ಪುಕ್ಕಟೆ ಸೌಲಭ್ಯ ಬೇರೆ ದಕ್ಕುತ್ತಿತ್ತು .ಒಂದು ಕಾಲುಪಾವಿಗೆ ( ಸೇರು) ಎರಡಾಣೆಯಂತೆ ಸಿಗುತ್ತಿತ್ತು. ನಮ್ಮ ಜೊತೆಗೆ ಆ ಮನೆಯ ಎಲ್ಲರೂ ಸ್ವತಃ ಸೇರುತ್ತಿದ್ದುದರಿಂದ ನಮ್ಮಲ್ಲೂ ಯಾವುದೇ ಕೀಳರಿಮೆ,_(ಅದು ಏನೆಂದು ಗೊತ್ತಿರಲೂ ಇಲ್ಲ, ಆ ಮಾತು ಬೇರೆ_) ಎಂದೂ ಕಾಡಲಿಲ್ಲ. ಶುಕ್ರವಾರ ನಮ್ಮ ಊರ ಸಂತೆ. ಅಂದು, ಒಂದು ,ಕೆಲವೊಮ್ಮೆ ಎರಡು ರೂಪಾಯಿಗಳು ಕೈಸೇರುತ್ತಿದ್ದವು. ಅಂಗೈಯ ಮೇಲಿನ ವಿದ್ಯಾರೇಖೆ, ಧನರೇಖೆ, ಆಯುಷ್ಯ ರೇಖೆಗಳನ್ನೆಲ್ಲ ಮುಚ್ಚಿಕೂತ ಆ ಚಿಲ್ಲರೆ ಪೈಸೆಗಳು ನಮ್ಮ ಕಣ್ಣುಗಳಲ್ಲಿ ತುಂಬುತ್ತಿದ್ದ ಬಣ್ಣಗಳಲ್ಲಿ, ಜಗತ್ತನ್ನೇ ವರ್ಣಮಯವಾಗಿಸ ಬಹುದಿತ್ತು. ಮಧ್ಯಾನ್ಹ ನಮ್ಮ 'ಪಗಾರ ಬಟವಡೆ ' ಯಾದಮೇಲೆ ಗುಂಪುಗೂಡಿ ವಾರದ ಸಂತೆಯಲ್ಲಿ ಅಡ್ಡಾಡಿ budget ಮೀರದಂತೆ ಅದು ಇದು ಖರೀದಿಸಿ ಒಂದು ದಿನದ ರಾಣಿಯಂತೆ( ಏಕ ದಿನ ಕೀ ರಾಣಿ) ಕಳೆದರೆ.ಮುಂಬರುವ ದಿನಗಳ ಕೆಲಸಕ್ಕೆ ಗೊತ್ತಿಲ್ಲದೇ ಕಾಯುತ್ತಿದ್ದುದು ಇನ್ನೂ ಹಸಿ ಹಸಿ ನೆನಪು... ಈಗ ಮನೆಯಲ್ಲಿ ಕುಳಿತು ಎಷ್ಟೋ ಸಾವಿರಗಳ ಪೆನ್ಶನ್ ಎಣಿಸುತ್ತೇವೆ. ಆದರೆ ಕಂಗಳಲ್ಲಿ ಕನಸುಗಳು ಅರಳುವದಿಲ್ಲ. ಹಣ ತುಂಬಿದ ಕೈಗಳಿಗೆ ರವಷ್ಟಾದರೂ ರೋಮಾಂಚನಗೊಳಿಸುವ ಆಕರ್ಷಣೆಯಿಲ್ಲ. ಬದಲಿಗೆ ಇತಿಹಾಸದ ಪುಟ ಸೇರಿದ ಪುಟ್ಟ ಪುಟ್ಟ ತಾಮ್ರದ ಕಾಸುಗಳಿಗಾಗಿ, ಅವು ಕೊಟ್ಟ ಒಂದು ಕಾಲದ ಸುಖದ ಗಳಿಗೆಗಳಿಗಾಗಿ ಮನ ಹಂಬಲಿಸುತ್ತದೆ. 'ಇರುವದೆಲ್ಲವ ಬಿಟ್ಟು ಇರದಿರುವದರ ಕಡೆಗಿನ ' ತುಡಿತ ' ಅಂದರೆ ಇದೇನಾ????
Wednesday, 30 December 2020
23. Jaraa dekha ke chalo, Aage bhee nahee, peeche bhee.
22. ಸಾಂಝ ಕೆ ಬಾದ್ ಸವೇರಾ ಹೈ...
21. ಹೆಸರಿನಲ್ಲೇನಿದೆ ಅನ್ನಬೇಡಿ.,.ಎಲ್ಲವೂ ಇದೆ.
20. ನಾ 'ಬರೆದಾ' ಒಲವಿನ ಓಲೆ... ಅದು ೧೯೬೫ ನೇ ಇಸ್ವಿ. ರಟ್ಟಿಹಳ್ಳಿಯಿಂದ ಧಾರವಾಡಕ್ಕೆ ಬಂದು ಕೆಲವು ತಿಂಗಳುಗಳಷ್ಟೇ ಆಗಿದ್ದವು. ಆಗಿನ್ನೂ ಕೆಲವೇ ಗೆಳತಿಯರ ಪರಿಚಯವಾಗಿತ್ತು. ಒಂದಿಬ್ಬರು ಒಂದಿಷ್ಟು ನನಗಿಂತ ದೊಡ್ಡವರು.ಅವರಲ್ಲಿ ಒಬ್ಬಳ ಮದುವೆ ಗೊತ್ತಾಗಿತ್ತು. ಮದುವೆ ಆರು ತಿಂಗಳ ನಂತರ ನಿಶ್ಚಿತ ವಾಗಿತ್ತು. ಹುಡುಗನಿಗೋ ತನ್ನ ಹುಡುಗಿ ತನಗೆ ಪತ್ರ ಬರೆಯಲಿ ಎಂಬಾಸೆ. ಇಂಗ್ಲಿಷಿನಲ್ಲಿ ಬರೆ ಎಂಬ ಆಗ್ರಹ ಬೇರೆ. ಇವಳಿಗೋ ಗಾಬರಿ" ತಪ್ಪಾದರೆ? ತಾನು ದಡ್ಡಿ ಎಂದಾದರೆ?" ಎಂಬ ದಿಗಿಲು. ಒಂದು ದಿನ ಕೈಯಲ್ಲಿ ಒಂದು ಅಂತರ್ದೇಶೀಯ ಪತ್ರ ಹಿಡಿದು ಓಡುತ್ತ ಬಂದಳು. ಮುಖದಲ್ಲಿ ಕಳವಳ, ಕಣ್ಣುಗಳಲ್ಲಿ ಕಂಡರಿಯದ ದಿಗಿಲು. ಕಾರಣ ಅವಳ ಹುಡುಗ ಮಾರುತ್ತರ ಬಯಸಿದ್ದ , ಅದೂ ಇಂಗ್ಲಿಷಿನಲ್ಲಿ." ಮುಂದೆ?" ನಾನೆಂದೆ. "ನಾನು ಹೇಳುತ್ತೇನೆ, ನೀನದನ್ನು ಇಂಗ್ಲಿಷಿನಲ್ಲಿ ಬರೆ" "ಹಾಂ?" ಇದು ನನ್ನ ತೆರೆದ ಬಾಯಿ ಪ್ರತಿಕ್ರಿಯೆ. ಆದರೆ ಆಗುವುದಿಲ್ಲ ಎನ್ನದಿರಲು ಅವಳ ಒದ್ದಾಟ ನೋಡಲಾಗದ್ದು ಒಂದು ಕಾರಣವಾದರೆ, ಅವಳ ಸ್ನೇಹ ಕಳೆದುಕೊಳ್ಳಬಾರದೆಂಬುದು ಇನ್ನೊಂದು ಕಾರಣ. " ನಿಮ್ಮ ಪತ್ರ ತಲುಪಿತು. ನೀವು ಕ್ಷೇಮ ಎಂದು ತಿಳಿದು ಆನಂದವಾಯಿತು.ನಾನೂ ಇಲ್ಲಿ ಕ್ಷೇಮವಾಗಿದ್ದೇನೆ. ಇದು ನನ್ನ ಮೊದಲ ಇಂಗ್ಲಿಷ ಪತ್ರ. ತಪ್ಪುಗಳಿದ್ದರೆ ಕ್ಷಮಿಸಬೇಕು." _ ಹೀಗೆ ಸಾಗಿದ ಅವಳ( ಪ್ರೇಮ??) ಪತ್ರದ ಇಂಗ್ಲಿಷ copy ಮಾಡಿಕೊಟ್ಟೆ. ನಾಲ್ಕು ದಿನ ಕಳೆದಿರಬಹುದು , ಮತ್ತೆ ಕೈಯಲ್ಲೊಂದು ಪತ್ರ ಹಿಡಿದು ಹಾರುತ್ತ ಬಂದಳು ಹುಡುಗಿ. ಮುಖದಿಂದಲೇ ಅವಳ ಸಂತಸ ಗುರುತಿಸಬಹುದಿತ್ತು. ಮೊಗದ ತುಂಬ ನಗು ಮಲ್ಲಿಗೆ." ತುಂಬ ಚನ್ನಾಗಿ ಬರೆದಿದ್ದೀಯಾ, very Good " ಅಂತ ಬರೆದಿದ್ದಾರೆ, ತುಂಬಾ thanks ನಿಂಗೆ "ಅಂದಳು. ಆಗ Mobile ಫೋನುಗಳಿರಲಿಲ್ಲ, ಅಲ್ಲದೇಹುಡುಗಿಯರೂ ಇಷ್ಟು ಶಿಕ್ಷಿತರಿರಲಿಲ್ಲ. ಮನೆಯ ವಾತಾವರಣವೂ ಬಿಗಿ. "ಬಾಗಿಲ ಚೌಕಟ್ಟಿನ ಮೇಲು ತೊಲೆಯನ್ನು ಹಿಡಿದು ಆಳೆತ್ತರ ನಿಂತು, ಮುಖದ ಮೇಲೆ ಹುಸಿನಗುವಿನೊಂದಿಗೆ ಪ್ರಿಯತಮೆಯರಿಗೆ ಕಾಯುವ ನಾಯಕರು, ಅವರನ್ನು ನೋಡುತ್ತಲೇ ಹಣೆಯ ಮೇಲಿನ ಸ್ವೇದ ಬಿಂದುಗಳನ್ನು ಒರೆಸುತ್ತ ಬಾಗಿಲು ತೆರೆದು ನಿಲ್ಲುವ ನಾಯಕಿಯರು ಕೇವಲ ಪಠ್ಯ ಪುಸ್ತಕದಲ್ಲಿ ಅಡಗಿಸಿಟ್ಟು ಓದುವ ಕಾದಂಬರಿಗಳಲ್ಲಿ ಕಾಣಬಹುದಾಗಿತ್ತು. ಉಳಿದಂತೆ ಒಬ್ಬಳ ಗಂಡನಾಗುವವನಿಗೆ ಬೇರೊಬ್ಬರು ಪತ್ರ ಬರೆಯಬಾರದೆಂದು ತಿಳಿಯಲಾರದ ಹಳ್ಳಿಯಂಥ ಪಟ್ಟಣದ ಹುಡುಗಿಯರು ನಾವು. ಯಾವುದೋ ಶಾನುಭೋಗನ ಗುಮಾಸ್ತ ಅರ್ಜಿ ಬರೆದಂತೆ ಬರೆದ ಆ ಪತ್ರದ ಇಂಗ್ಲಿಷ ಪ್ರತಿ ಮಾಡಲು ನನಗೆ ಮುಜುಗರವಾಗಿರಲೂ ಇಲ್ಲ ಆ ಮಾತು ಬೇರೆ...ಅಷ್ಟು ಮುಗ್ಧರಾಗಿದ್ದೆವೋ, ಇಲ್ಲ ಪೆದ್ದರಾಗಿದ್ದೆವೋ ಇಂದಿಗೂ ನನಗೆ ಗೊತ್ತಿಲ್ಲ. Stay home time table ನಲ್ಲಿ ಕೆಲ ಹೊತ್ತು ಹಳೆಯ ಸಿನೆಮಾ ಹಾಡು ಕೇಳುವದೂ ಇದೆ. ನಿನ್ನೆ " ಯೇ ಮೇರಾ ಪ್ರೇಮಪತ್ರ ಪಢಕರ್" ಹಾಡು ಕೇಳಿದಾಗ ನೆನಪಾದ ಪೂರ್ವಾಶ್ರಮದ ಹಳೆಯ ನೆನಪುಗಳ ಹಳವಂಡವಿದು...😍
Monday, 28 December 2020
19. ಭಲಾ ಕೀಜೆ ಭಲಾ ಹೋಗಾ?
'ಒಳ್ಳೆಯ'ವರಾಗಬೇಕೆಂದರೆ ಎಷ್ಟು ಒಳ್ಳೆಯವರಾದರೆ, ಒಳ್ಳೆಯದು???
" ಆ ಹೊಸ ಕಪ್ಪು ಯಾಕ ಹೊರಗ ತಗದಿ? ಎರಡು ದಿನದಾಗ ಅಂಚು ಹಾರ್ತಾವ ನಿಮ್ಮ ಕೈಯಾಗ. ಆಮ್ಯಾಲ ಮಂದಿ ಬಂದಾಗ ಏನ್ ಮಾಡ್ಬೇಕು? ತಗಿ ಅವನ್ನ. ಹಳೆವು ತೊಳಕೋ"
" ಇವತ್ತ ಈ ಸೀರಿ ಮ್ಯಾಲ ನಡಸ್ತೇನಿ ..ಇರ್ಲಿ ಬಿಡ , ನಮ್ಮನೀದು ಸಣ್ಣ ಕಾರ್ಯಕ್ರಮ ಅದ. ಮತ್ತೆಲ್ಲರ ಹೋದ್ರ ಆವಾಗ ಬೇಕಾಗ್ತದ."
" ಇವತ್ತ ಪನೀರ್ ಮಸಾಲಾ ಬ್ಯಾಡ ಪುಟ್ಟ. ನಾಡದ ಅಂಕಲ್ ,ಆಂಟಿ ಊಟಕ್ಕ ಬರ್ತಾರಲಾ, ಅವತ್ತ ಮಾಡ್ತೇನಿ. ಇವತ್ತ ಬೆಂಡಿಕಾಯಿ ಮಾಡ್ತೇನಿ."
" ಆ ಹೊಸಾ bedsheet ಯಾಕ ಹಾಕ್ದಿ ನಿನ್ನ ಗಾದಿಗೆ.? ನಾಳೆ ಮಾಮಾ ಬಂದ್ರ ಬೇಕಾಗ್ತದ ಅಂತ ಮುದ್ದಾಂ ಎತ್ತಿಟ್ಟಿದ್ದೆ. ನಿನ್ ಕಣ್ಣಿಗೆ ಹೆಂಗ ಬಿತ್ತು .ಹೊಟ್ಯಾಗ ಮುಚ್ಚಿಟ್ಟರೂ ಪತ್ತೆ ಹಚ್ತೀರಿ"
ಇಂಥ ಮಾತುಗಳನ್ನ ಎಲ್ಲರ ಮನ್ಯಾಗೂ ಒಮ್ಮಿಲ್ಲ ಒಮ್ಮೆ ಎಲ್ಲಾರೂ ಕೇಳಿರ್ತೀವಿ. ನಾನೂ ಕೇಳೇನಿ. ಮಕ್ಕಳಿಗೂ ರಗಡ ಸಲ ಮತ್ತ ಮತ್ತ ಹೇಳೇನಿ, ನಮ್ಮ ಅಜ್ಜಿ, ಅವ್ವ, ಅಕ್ಕ ಸಾವಿರಸಲ ನಮ್ಗ ಹೇಳ್ಕೋತನ ಇದ್ದ ಮಾತು ಇವು. ಪ್ರತಿಸಲ ನಾನು ವಿಚಾರ ಮಾಡಿದ್ದುಂಟು...
ಯಾಕ ನಮಗ ಯಾವಾಗಲೂ ನಮ್ಮಕಿಂತ ಬೇರೆದವರು ಮುಖ್ಯ ಆಗ್ತಾರ? ಆಗಬೇಕು? ನಮ್ಮನ್ನ ಗುಡಿಸಿ, ಉಡುಗಿಸಿ ಬದಿಗಿಟ್ಟು ಹೊರಗಿನವರಿಗೆ ಕೆಂಪು ಹಾಸಿನ ಆತಿಥ್ಯ ಯಾಕ ಕೊಡ್ತೇವಿ? ಅತಿಥಿ ದೇವೋಭವ ಅನ್ನೋದನ್ನ ಕೇಳಿ ಕೇಳಿ, ನಮ್ಮ ಹಿರೇರು ನಡಕೊಂಡದ್ದನ್ನ ನೋಡಿ ನೋಡಿ ಇರಬಹುದಾ?
ನಮ್ಮ ಅಂತಸ್ತು, ಔದಾರ್ಯ, ಇರುವಿಕೆ, ಸ್ಥಾನಮಾನವನ್ನು ಇದ್ದದ್ದಕ್ಕಿಂತ ಎತ್ತರಿಸಿ ತೋರಿಸಬೇಕೆಂಬ ಸಹಜ ಹಂಬಲವೋ?
" ವ್ಹಾ!! ಆದರ , ಆತಿಥ್ಯ ಅನ್ಬೇಕು____ ಇಂಥವರ ಮನ್ಯಾಗ, ಏನು ಶಿಸ್ತು! ದೊಡ್ಡವರು ಬಿಡರಿ, ಸಣ್ಣ ಸಣ್ಣ ಮಕ್ಕಳೂ ಸಹ ಹಂಗsss ತಯಾರ ಆಗ್ಯಾವ್ರಿ!!.ಸಂಸ್ಕಾರ ಅಂದ್ರ ಅದ ನೋಡ್ರಿ." ಇಂಥ ನಾಲ್ಕು ಮಾತುಗಳಿಂದ ಉಬ್ಬಿಹೋಗುವ ಮಾನವನ ಸ್ವಾಭಾವಿಕ ಗುಣವೋ...
ಸ್ವಭಾವತಃ ಸಂಸ್ಕಾರಗಳಿಂದ ,ತಂದೆ ತಾಯಂದಿರ ನಡುವಳಿಕೆಯಿಂದ ಬಂದ ಆಯಾ ಮನೆತನದ ರೂಢಿ ,ಸಂಪ್ರದಾಯಗಳೋ?
ಕಾರಣವೇನೇ ಇರಲಿ, ಎಲ್ಲದಕ್ಕೂ ಒಂದು ಮಿತಿಯಿರುವದು ಒಳ್ಳೆಯದು ಎಂಬುದು ನನ್ನ ಅನಿಸಿಕೆ .ನಾವಿದ್ದಂತೆ ಎಲ್ಲರೂ ಇದ್ದಾಗ, ಕೊಡ ಕೊಳ್ಳುವಿಕೆ ಉಭಯ ಪಕ್ಷಗಳಿಗೂ ಸರಿಸಮನಾದಾಗ ಪ್ರಶ್ನೆಯೇ ಇಲ್ಲ. ಹಾಗಿರಲೇಬೇಕಿಲ್ಲ ಎಂಬುದನ್ನು ನಾವು ದಿನ ನಿತ್ಯ ಕಾಣುತ್ತೇವೆ. ಕೆಲವರು ಸ್ವಂತಕ್ಕೆ ಹೇಗಿರುತ್ತಾರೋ ಹಾಗೆಯೇ ಬೇರೆಯವರ ವಿಷಯದಲ್ಲೂ ಇರುತ್ತಾರೆ. ಅದು ಬೇರೆ ವಿಷಯ. ಇನ್ನು ಕೆಲವರಿಗೆ ಆತಿಥ್ಯ ಮಾಡುವ ಮನಸ್ಸು ತುಂಬಾನೇ ಇರುತ್ತದೆ. ಅನುಕೂಲ ಇರುವದಿಲ್ಲ. ಅತಿಥಿಗಳೆದುರು ಹಿಡಿಯಾಗಿ, ಮುಷ್ಟಿಯಾಗಿ ಕುಗ್ಗಿಹೋದಂತೆ ಯಾತನೆ ಅನುಭವಿಸುತ್ತಾರೆ. ಅವರನ್ನು ಆಲಂಗಿಸಿಕೊಂಡು ಕೊಟ್ಟದ್ದೆಲ್ಲವನ್ನೂ ಮಹಾಪ್ರಸಾದವೆಂಬಂತೆ, ಥೇಟ್ ಕೃಷ್ಣ ಸುದಾಮನ ಅವಲಕ್ಕಿಗೆ ಪ್ರತಿಕ್ರಯಿಸಿದಂತೆ ಮಾಡಿ ಹೊಟ್ಟೆ, ಮನಸ್ಸು ಎರಡನ್ನೂ ತುಂಬಿಸಿಕೊಂಡು ಭೇಟಿಯನ್ನು ಅವಿಸ್ಮರಣೀಯವಾಗಿ ಮಾಡುವುದು ಸುಲಭ.
ಪ್ರಶ್ನೆ ಬರುವದು , WHEN WE ARE TAKEN FOR GRANTED... ಇವರದು ಮೂರನೇ ಪ್ರಕಾರದ ತಳಿ. ಸ್ವಂತಕ್ಕೆ ರಾಜ ಮಹಾರಾಜರ style ನ ಬದುಕು. ಯಾವುದಕ್ಕೂ ಕಡಿಮೆಯಿಲ್ಲ. ಇತರರಿಂದ ಮಾಡಿಸಿಕೊಳ್ಳಲೂ ಸಂಕೋಚವಿಲ್ಲ. ನಿಮ್ಮ ಮನೆಗೆ ಬಂದು, ನಿಮಗೆ ಬೇಕಾದಂತೆ ಮಾತಾಡಿ, ಸ್ವಲ್ಪು ಹೆಚ್ಚೇ ಆತ್ಮೀಯತೆ ತೋರಿಸಿ ,"ಗೆಳೆಯ ರಿದ್ದರೆ ಹೀಗಿರಬೇಕು" ಅನ್ನುವ ಛಾಪು ಮೂಡಿಸಿ ಮರೆಯಾಗುತ್ತಾರೆ. ತಿರುಗಿ ಭೇಟಿಯಾದರೆ ದೂರದಲ್ಲಿದ್ದರೆ ಕೈಯತ್ತಿ ' ಹಾಯ್' ಅಂದಾರು. ನಾಲ್ಕು ಜನರ ಸಮೇತ ಒಟ್ಟಿಗೆ ಭೇಟಿಯಾದರೆ ಕೈ ಕುಲುಕಿಯಾರು. ಇದಕ್ಕೂ ಹೆಚ್ಚಿಗೆ ಯಾವ ಕಾಲಕ್ಕೂ , ಏನನ್ನೂ ಅಪೇಕ್ಷಿಸಲಾರಿರಿ. ಇವರೇ ಮುಖವಾಡದ ಮಂದಿ...
ಪರಿಸ್ಥಿತಿ ಹೀಗಿರುವಾಗ " ಕುಟುಕುವದು ಚೇಳಿನ ಕೆಲಸ. ಅದನ್ನು ನೀರಿನಿಂದ ಎತ್ತಿಹಾಕಿ ಕರುಣೆ ತೋರಿ ಬದುಕಿಸಬೇಕಾದುದು ಸಜ್ಜನನ ಕೆಲಸ" ಎಂಬ ಟೊಳ್ಳು ಸಿದ್ಧಾಂತ ಏಕ ಮುಖವಾಗಿ ಪಾಲಿಸುತ್ತಲೇ ಇರುವದು ಎಷ್ಟು ಸರಿ? " ಕಡಿಯುವದು ಖಂಡಿತ ಬೇಡ... ಭುಸ್್್ಅಂತಾದರೂ ಅನ್ನಬೇಡವೇ ಬದುಕಿ ಇರಲು.?
SURVIVAL OF THE FITTEST ಅನ್ನುವದು ಬದುಕಿನ ರೀತಿ ಎಂದಾದರೆ ಅದರ ವಿರುದ್ಧವಾಗಿ ನಡೆದುಕೊಳ್ಳುವ ತೆವಲು ಯಾಕೆ? ಎಲ್ಲಿಯ ವರೆಗೆ ' ಒಳ್ಳೆಯತನ ಬಲಹೀನತೆ' ಎಂದು ಬಿಂಬಿಸಲ್ಪಡುವದೋ ಅಲ್ಲಿಯ ವರೆಗೆ ನಾವೂ ಬಲವಿದ್ದವರೆ ಎಂದು ತೋರಿಸಿದರೆ ಅಪರಾಧವೇಕಾಗಬೇಕು?
ಇಷ್ಟೆಲ್ಲ ಬರೆದದ್ದು ನೋಡಿ
ನಾನೇನೋ ಮಹಾ ಬದಲಾವಣೆ ಆಗಬಹುದು ಅಂದುಕೊಂಡಿರೋ You are wrong. ಅದು ಹಾಗಾಗುವದಿಲ್ಲ. ನನಗಷ್ಟೇ ಅಲ್ಲ ಬಹಳ ಜನರಿಗೆ. ಅನೇಕ ವಿಷಯಗಳನ್ನು ನಾವು ಬದುಕಿನ ದಾರಿ ಅಂದುಕೊಂಡಿರುವದಿಲ್ಲ .ಅದೇ ಬದುಕು ಅಂದುಕೊಂಡಿರುತ್ತೇವೆ..ಅದನ್ನು ಬದಲಿಸುವದು ಸುಲಭ ಸಾಧ್ಯವಿಲ್ಲ..
ನಾನು ಹೀಗೆ ವಿಚಾರ ಮಾಡಿದ್ದು ಸಾವಿರ ಸಲ...
ಆದರೆ ಹಾಗೆ ಇರಲಾಗಿಲ್ಲ ..
ಆ ಮಾತು ಬೇರೆ...
ಆದರೆ ಆ ದಿಕ್ಕಿನಲ್ಲೊಂದಿಷ್ಟು ಯೋಚಿಸುವದು, ಅವಶ್ಯವಿದ್ದಾಗ ಹಿಡಿಯಷ್ಟಾದರೂ ಬದಲಾವಣೆಯಾಗುವದು ಅಪೇಕ್ಷಣೀಯ ಎಂಬ ಪ್ರಾಮಾಣಿಕ ಅನಿಸಿಕೆ ನನ್ನದು...
18. Need not handle with care, we are not fragile...
18. You need not handle with care...we are not fragile...
" ಏನಮ್ಮ, ಬಹಳ ದಿನಗಳಾಗಿತ್ತು ಭೇಟಿಯಾಗಿ. ಹುಶಾರಾಗಿದೀಯಾ?"
" ಹಾಂ, ಆಂಟಿ ಆರಾಮಾಗಿದೀನಿ"
" ಏನೋ ಹುಶಾರಿರಲ್ಲ ಅಂತ ಸುದ್ದಿ ಕೇಳ್ದೆ. ಏನಾಗಿತ್ತು?"
" ಬಲಭಾಗದ ಎದೆಯಲ್ಲಿ ಒಂದು ಗಡ್ಡೆಯಾಗಿತ್ತು ಆಂಟಿ. ಆಪರೇಶನ್, treatment, ಎಲ್ಲ ಆಗಿ ಈಗ ಹುಶಾರಾಗಿದೀನಿ".
" ಬೇಗ ತೋರಿಸ್ಬೇಕಾಗಿತ್ತೇನೋ. ಅಷ್ಟು ತೊಂದರೆಯಾಗ್ತಿರ್ಲಿಲ್ಲ ಅನಿಸುತ್ತೆ".
"ಲೇಟಾಗಿಲ್ಲ ಆಂಟಿ, ಗೊತ್ತಾದ ದಿನಾನೇ hispital ಗೆ ಹೋದದ್ದು .ಅದಕ್ಕೇ ಗುಣಾನೂ ಆಯ್ತು"
" ಏನೋಮ್ಮಾ, ಈ ಜಡ್ಡುಗಳೇ ಹಾಗೆ...ಗುಣ ಅಂತೇನೋ ಅನಿಸುತ್ವೆ, ಆದ್ರೆ ಮತ್ತೆ ಯಾವಾಗ ಯಾವರೂಪದಲ್ಲಿ ಧುತ್ತೆಂದು ಎದುರು ನಿಲ್ಲುತ್ವೋ ಗೊತ್ತಾಗೋದೇ ಇಲ್ಲ.
ಯಾವುದಕ್ಕೂ ಹುಶಾರಿರು ಆಯ್ತಾ? ಬರ್ತೀನಮ್ಮ."
ಮೇಲಿನ ಸಂಭಾಷಣೆ ಮೇಲ್ನೋಟಕ್ಕೆ
ಒಬ್ಬ ರೋಗಿ , ಇನ್ನೊಬ್ಬ ಹಿತೈಷಿಯ ಸಂಭಾಷಣೆಯಂತೆ ಕಾಣುತ್ತದೆ, ಆದರೆ ಹೌದೇ ಅಲ್ಲವೇ ಅನ್ನುವದನ್ನು ಆ ಇಬ್ಬರೇ ನಮಗೆ ಹೇಳಬೇಕು..
ರೋಗಮುಕ್ತರಾಗಿದ್ದರೂ ರೋಗದ ಪ್ರಸ್ತಾಪವೇ ಮನಸ್ಸಿನಲ್ಲಿ ಆತಂಕವೆಬ್ಬಿಸಿ ಜೀವ ತಲ್ಲಣಿಸುವಂತೆ ಒಬ್ಬರಿಗೆ ಮಾಡಿದರೆ, ಇನ್ನೊಬ್ಬರ ಪ್ರಶ್ನೆಗಳು, ನಿಜಕ್ಕೂ ಆ ವ್ಯಕ್ತಿಯ ಮೇಲಿನ ಕಾಳಜಿಯಿಂದ ಕೇಳಿದ್ದೇ, ಅಥವಾ ವಿಷಯ ತಿಳಿಯಬೇಕೆಂಬ ಅನುಚಿತ ಕುತೂಹಲವೇ? ಎಂಬುದು ಚಿದಂಬರ ರಹಸ್ಯವಾಗಿಯೇ ಉಳಿದುಬಿಡುತ್ತವೆ.
ಸಾಧಾರಣವಾಗಿ ಕ್ಯಾನ್ಸರ್ ಮಾತ್ರವಲ್ಲ, ಯಾವುದೇ ಒಂದು ಕಾಯಿಲೆಯಿಂದ ಬಳಲುವವರು ಸದಾ ದುಃಖದಲ್ಲಿಯೇ ಬಳಬಳ ಅಳ್ತಾನೇ ಇರ್ತಾರೆ ಅಂತ ಜಗತ್ತು ತೀರ್ಮಾನಿಸಿ ಬಿಟ್ಟಿರುತ್ತದೆ. ಅವರಿಗೆ ಸಾಂತ್ವನದ ಮಾತುಗಳನ್ನು ಆಡಲೇಬೇಕೆಂದು ತೀರ್ಮಾನಿಸಿ ಕೆಲವು ಮರುಕದ ಡೈಲಾಗುಗಳ script ರೆಡಿ ಮಾಡಿಟ್ಟು ಕೊಂಡಿರುತ್ತಾರೆ . ಅವು waste ಆಗಬಾರದಲ್ಲವಾ?
ಆದರೆ ಬಂದದ್ದೆಲ್ಲವನ್ನೂ challenge ಎಂದು ಸ್ವೀಕರಿಸಿ ,ಅಗ್ನಿ ಪರೀಕ್ಷೆಯಲ್ಲಿ ಗೆದ್ದು,' ಬದುಕು ಬದಲಿಸಬಹುದು' ಎಂದು ತೋರಿದವರೂ ಕಡಿಮೆಯೇನಿಲ್ಲ.'
"ನಿಮಗಿರುವದು ಎರಡೇ ತಿಂಗಳು' ಎಂದು ಹೇಳಿದ ಹಂತದಲ್ಲಿ ಸಹ ಕೇವಲ ಅಂತಃ ಶಕ್ತಿಯಿಂದ ಬದುಕುಳಿದ ಹಲವರು ನಮ್ಮ ಮಧ್ಯದಲ್ಲಿಯೇ ಇದ್ದಾರೆ."
"ಹೋಗು, ನಿನಗೆಂಥ ಅವಸರ? ನಾನು ಬರಬೇಕಾದಾಗ ಬರುತ್ತೇನೆ.
ನೀನೇನು ಬಂದು ಕರೆಯುವದು? "ಎಂಬ ಧಾಟಿಯಲ್ಲಿ ಮಾತನಾಡಿ ಮೃತ್ಯು ವನ್ನೇ ದ್ಶಿ್ಭ ಮನೆಬಾಗಿಲಿನಿಂದ ಹೊಡೆದು ಓಡಿಸಿದವರಿದ್ದಾರೆ...
"ನಿನ್ನ ಪಾಡಿಗೆ ನೀನಿರು. ನೀನು ನನ್ನನ್ನು ಹೆದರಿಸಲಾರೆ. ನಾ ಹೊರಟೆ ನನ್ನ ಬದುಕು ನಾ ಬದುಕಲು.."
ಎಂದು ಕೊಡವಿ ಮೇಲೆದ್ದು ಬದುಕ ಹೊರಟವರಿದ್ದಾರೆ.
ಹೀಗೆ ಜಡ್ಡು ಅಕ್ಷರಶಃ ದೈಹಿಕವಾಗಿ ಮಂಡಿಯೂರಿಸಿದರೂ ಮಾನಸಿಕವಾಗಿ ಅವರನ್ನು ಕಿಂಚಿತ್ತೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂಬುದನ್ನು ಜಗತ್ತಿಗೇ ತೋರಿಸಿದವರಿದ್ದಾರೆ." "cancer ಬಾಗಿಲ ಹೊರನಿಂತು ಒಳಗೆ ಬರಲೇ ಅಂದಾಗ, ಸ್ವಲ್ಪು ತಾಳು ,ಇನ್ನಷ್ಟು ಕೆಲಸವಿದೆ " ಎಂದ ಡಾ,ಅನುಪಮಾ ನಿರಂಜನ," ನನಗೆ ಇಷ್ಟು ಬೇಗನೇ ಸಾಯುವದು ಇಷ್ಟವಿಲ್ಲ, ನಾನಿನ್ನೂ ಕಾಂಬೋಡಿಯಾ, ಇಟಲಿ ನೋಡಬೇಕು,ಒಂದಿಷ್ಟು ಬರೆಯೋದಿದೆ, ಅದನ್ನು ಮುಗಿಸಬೇಕು, ಬದುಕನ್ನು ಒಂದಿಷ್ಟು FAST FARWORD ಮಾಡಿಕೊಂಡು ಬದುಕಿ ಬಿಡಲಾ ಎಂದು ಕೇಳಿ ಡಾಕ್ಟರರಿಂದ ಉತ್ತರ ಪಡೆದು ಮಾಮೂಲಿ ವೇಗದಲ್ಲಿಯೇ ಬದುಕಿ ಇದೀಗ ನಡೆದದ್ದೆಲ್ಲ ಒಂದು ಕೆಟ್ಟ ಕನಸು ಎಂಬಂತೆ,ತಮ್ಮ ಅನುಭವಗಳನ್ನೆಲ್ಲ ' ಸಾಸಿವೆ ತಂದವಳು' ಎಂಬ ಪುಸ್ತಕದಲ್ಲಿ ದಾಖಲಿಸಿ ಇಟ್ಟ ನಮ್ಮ ನಚ್ಚಿನ ಭಾರತಿ B.V. ಇದ್ದಾರೆ...
" ಬದುಕು ಏನನ್ನು , ಎಷ್ಟೆಲ್ಲವನ್ನೂ ಕಲಿಸುತ್ತದೋ ಅದಕ್ಕಿಂತ ಹೆಚ್ಚಿನದನ್ನು ಸಾವು, ಸಾವಿನ ನೆರಳು ಸ್ವಲ್ಪೇ ದಿನಗಳಲ್ಲಿ ಕಲಿಸುತ್ತದೆ. ಎಲ್ಲೋ ಕೇಳಿದ ಅಪ್ರಬುದ್ಧ ಮಾತುಗಳನ್ನು ರೋಗಿಗಳೆದುರು,ಅಥವಾ ಅದನ್ನು ಗೆದ್ದು ಆತ್ಮಸ್ಥೈರ್ಯದಿಂದ ಮುನ್ನಡೆದು ಮುಖ್ಯ ವಾಹಿನಿ ಕಡೆಗೆ ಮುಖಮಾಡಿದವರೆದುರು
ಆಡಿ ಮುಗಿಸುವ ತೆವಲಿಗೆ ನಾವು ಬೀಳುವ ಕಾರಣವಿಲ್ಲ .ಅಲ್ಲಿ ಇಲ್ಲಿ ನಾವು ಕೇಳಿದ್ದನ್ನು ಸ್ವತಃ ಅವರು ಅನುಭವಿಸಿ ಹೆಚ್ಚಾಗಿಯೇ ತಿಳಿದು ಕೊಂಡಿರುತ್ತಾರೆ. ನಮ್ಮಂಥ ಕೆಲವರಿಗೆ ಅದು 'ಲೊಚ್ ಲೊಚ್ ' ಅನ್ನುವಂಥ ರೋಚಕ ಕಥೆ...
ಆದರೆ ಅವರಿಗೆ ಸಾವು- ಬದುಕಿನ ಕಥೆ..
ಅವರನ್ನು ಅವರ ಧೈರ್ಯದೊಂದಿಗೆ ಬದುಕಲು ಬಿಡಲೇಬೇಕು...
PLEASE, DON'T HANDLE US WITH CARE..
WE ARE NOT FRAGILE..
ಇದು ನನ್ನದಾಗಿಯೂ ನನ್ನದಲ್ಲದ ವಿಚಾರಗಳು .ಕಾರಣ ನನ್ನ ಗೆಳತಿ ಭಾರತಿ B.V.ಯವರ ' ಸಾಸಿವೆ ತಂದವಳು ಪುಸ್ತಕ ಓದಿದ ಮೇಲೆ ಅದರಲ್ಲಿಯ ಕೆಲ ವಿಚಾರಗಳು ಹೆಚ್ಚು ಜನರಿಗೆ ತಲುಪಲೇಬೇಕು ಅನಿಸಲು ಶುರುವಿಟ್ಟುಕೊಂಡಿತು.ಅವರನ್ನೇ ಕೇಳಿದೆ. ' ನಿಮ್ಮ ಕೈಯಲ್ಲಿ ಪುಸ್ತಕ ಇಟ್ಟಿದ್ದೇನೆ .ಹೇಗಾದರೂ ಬಳಸಿಕೊಳ್ಳಿ ಎಂಬ ಮುಕ್ತ ಪರವಾನಿಗಿ ಕೊಟ್ಟರು..ಆಗ ಪುಸ್ತಕದಿಂದಲೇ ಆಯ್ದ ವಿಚಾರಗಳಿಗೆ ಒಂದು ರೂಪು ಕೊಟ್ಟು column ಬರೆದಿದ್ದೇನೆ. ಫಲಿತಾಂಶ ನೀವು ಹೇಳಬೇಕು.
17. ಭಗವಾನ್, ತೇರೀ ಸೂರತ್ ಕ್ಯಾ ಹೋಗಿ??
ಒಂದು ದಿನ ದೇವರು ಹಾಗೂ ಮನುಷ್ಯನ ಮುಖಾಮುಖಿ ಯಾಯಿತು. ಇಬ್ಬರ ಬಾಯಿಂದಲೂ ಉದ್ಗಾರ ಹೊರಟಿತು,
"Oh!!! HERE IS MY CREATOR"...
ಇದನ್ನು ಯಾರು ಮೊದಲು ಬರೆದರೋ ಗೊತ್ತಿಲ್ಲ. ಆದರೆ ಹೇಳಿಕೆ ಮಾತ್ರ ಹದಿನಾರಾಣೆ ಸತ್ಯ. ದೇವರು ಜಗನ್ನಿಯಾಮಕ, ಸೃಷ್ಟಿಕರ್ತ ,ಜಗನ್ನಾಥ ಅಂತ ಏನೆಲ್ಲ ಹೇಳುವದರ ಹಿಂದೆ ನಮ್ಮ ಅಚಲ ವಿಶ್ವಾಸವಿದೆ. ಅಲುಗಾಡದ ನಂಬಿಕೆ ಇದೆ. ಇನ್ನು ಆ ದೇವರು ಯಾರು ಎಂಬುದು ಅವರವರಿಗೆ ಬಿಟ್ಟ ವಿಷಯ. ಕೆಲವರು ಗುರುದ್ವಾರ, ಮಂದಿರ, ಚರ್ಚು, ಮಸೀದಿಗಳಲ್ಲಿ ಅವನ ನೆಲೆ ಕಂಡರೆ ,ಇನ್ನು ಕೆಲವರು ಸತ್ಕರ್ಮ, ಸದ್ವಿಚಾರ, ಸದಾಚಾರಗಳ ನೆಲೆಯಲ್ಲಿ ದೈವತ್ವ ಕಾಣುವದು ಇದೆ. ದೇವರೆಂದರೆ positive energy. ಒಳ್ಳೆಯದು ಎಲ್ಲಿದೆಯೋ, ಅಲ್ಲೆಲ್ಲ ದೇವರಿದ್ದಾನೆ. ಸತ್ಯಂ, ಶಿವಂ, ಸುಂದರಂ ಅನ್ನುವದು ಅದಕ್ಕೇನೆ. ಸತ್ಯ, ದೇವರು, ಸುಂದರವಾದ, ಅನಂತವಾದ ಸೃಷ್ಟಿ ಎಲ್ಲವೂ ಭಗವಂತನ ಬೇರೆ ಬೇರೆ ರೂಪಗಳೇ . A thing of beauty is joy for ever - ಎಂದು John Keats ಎಂಬ ಇಂಗ್ಲಿಷ್ ಕವಿ ಹೇಳಿದ ಮಾತು ಅಕ್ಷರಶಃ ನಿಜ.
ನಮ್ಮದು ಒಂದು ಪುಟ್ಟ ಹಳ್ಳಿ. ತನ್ನದೇ ಪುಟ್ಟದೊಂದು ಜಗತ್ತು. ಅಲ್ಲಿ ಕೇಳಿ ಕಲಿಯುವದಕ್ಕಿಂತ ನೋಡಿ ಕಲಿಯುವದೇ ಬಹಳವಿತ್ತು. ದೇವರೆಂದರೆ ಏನು ಎಂದು ಗೊತ್ತಾಗುವ ಮೊದಲೇ ಇತರರನ್ನು ನೋಡಿ ಗುಡಿಗೆ ಹೋಗುವದು, ಭಜನೆಗಳಲ್ಲಿ ಭಾಗವಹಿಸುವದು, ಸರತಿಯಲ್ಲಿ ನಿಂತು ತೀರ್ಥ, ಪ್ರಸಾದ ಸೇವಿಸುವದು ,ಉತ್ಸವ, ಆರಾಧನೆಗಳಲ್ಲಿ ಭಾಗವಹಿಸುವುದು ಏನೆಲ್ಲಾ ಮಾಡುತ್ತಿದ್ದರೂ ಏಕೆಂಬುದು ನಮಗೇ ಗೊತ್ತಿರಲಿಲ್ಲ. ಕ್ರಮೇಣ ಸ್ವಲ್ಪು ಸ್ವಲ್ಪು ಅರಿವಾಗತೊಡಗಿದಂತೆ ನಮ್ಮಲ್ಲೇ ಪ್ರಶ್ನೆಗಳು ಏಳತೊಡಗಿದವು. ಇನ್ನೂ ದೊಡ್ಡವರಾದಂತೆ ಯಾರನ್ನು ಮಾದರಿ ಎಂದುಕೊಂಡಿದ್ದೆವೋ ಅಂಥ ಕೆಲವರ ಮಾತು, ಕೃತಿಗಳ ನಡುವಿನ ಅಂತರ ನಮಗೇ ದಿಗಿಲು , ಅಪನಂಬಿಕೆ ಹುಟ್ಟಿಸುತ್ತಿತ್ತು. ದೇವರ ಹೆಸರಿನಲ್ಲಿ ನಡೆವ ರಾಜಕೀಯ, ಧಾರ್ಮಿಕ ಸಂಘರ್ಷಗಳ ಅತಿರೇಕ, ದೇವರದೇ ಮೂರ್ತಿಗಳ , ಆಭರಣಗಳ ಕಳವಿನ ಪ್ರಕರಣಗಳು , ದೇವಾಲಯದ ಆಸ್ತಿ ಕಲಹಗಳು, ಕೊಲೆಗಳು, ಪ್ರಸಾದದಲ್ಲಿ ವಿಷ ಸೇರಿಸುವದು, ಇಂಥ ಹಲವಾರು ಪ್ರಕರಣಗಳನ್ನು ಕೇಳಿ, ಓದಿನೋಡಿ ಅನುಭವಿಸಿದಾಗ ನಂಬಿಕೆಯ ಮರ ಬುಡಕಡಿದು ಬಿತ್ತು. ಎಲ್ಲರೂ ಹಾಗೆಯೇ ಇರುವದಿಲ್ಲ. ಸಾತ್ವಿಕ ಹಾಗೂ ಧಾರ್ಮಿಕ ಜೀವಿಗಳೂ ಇಂಥ ಸಂದರ್ಭದಲ್ಲಿ ಬಲಿಪಶುವಾಗಿದ್ದಾರೆ, ಆಗುತ್ತಿದ್ದಾರೆ. ಅಲ್ಲದೇ ಅಂಥವರೇ ಇವರಂಥವರ ಮಧ್ಯೆ ನಮಗೆ ದಾರಿ ದೀಪವೂ ಆಗಿದ್ದಾರೆ. ಆದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವಂಥ "ಭಗವಾನ" ರೇ ಇರುವವರೆಗೆ ಭಯ, ಅವಿಶ್ವಾಸ, ಆತಂಕಗಳಿಗೇನೂ ಬರವಿಲ್ಲ...
"ಕಲ್ಲಿನಲಿ ಕೆತ್ತಿದನು ಶಿಲ್ಪಿಯವ ಶಿವನ, ದೇಗುಲದಿ ಕೂಡಿದನು ವೈದಿಕನು ಅವನ." ಎಂಬಂಥ ಕವಿತೆಗಳ ಹುಟ್ಟಿಗೂ ಕಾರಣವಾಗುವದನ್ನು ತಪ್ಪಿಸುವಂತೆಯೇ ಇಲ್ಲ.
ಅಂತಿಮವಾಗಿ ನನಗನನಿಸಿದ್ದು_
ದೇವರು ಒಂದು ಶಕ್ತಿ, ಒಂದು ಭಕ್ತಿ, ಒಂದು ಏಕಾಂತ. ಒಂದು ಸಂಕೇತ. ದೇವರು ಅವರವರ ಭಾವಕ್ಕೆ. ಅವರವರ ಭಕುತಿಗೆ. ಯಾವ ಯಾವ ಕಡೆ ಒಳ್ಳೆಯದಾಗಿದೆಯೋ ಅಲ್ಲಿ ಖಂಡಿತ ದೇವರಿದ್ದಾನೆ. ನಮ್ಮ ಆತ್ಮೀಯರೊಬ್ಬರ ವಿಷಯವನ್ನಿಲ್ಲಿ ಬರೆಯಲೇಬೇಕು. ಅವರ ಮಟ್ಟಿಗೆ ಸಾತ್ವಿಕವಾದುದು, ಒಳ್ಳೆಯದು, ಆನಂದ ನೀಡುವ ಪ್ರತಿಯೊಂದೂ ದೇವರೇ. ದೇವರ ಸಾನಿಧ್ಯವೇ. "ನನಗೆ ದೇವರೆಂದರೆ ಬೇರೆಯೇ. ಆದರೆ ಯಾವುದಾದರೂ ಸಜ್ಜನರೊಬ್ಬರು ಪೂಜೆ, ಆರಾಧನೆಗೆ ನನ್ನನ್ನು ಆಮಂತ್ರಿಸಿದರೆ ಅವರು ಹೇಳಿದ ಹಾಗೆ ಕೇಳಿ , ಅವರು ಬಯಸಿದಂತೆ ಇದ್ದು ಅವರ ಮುಖದ ಮೇಲೊಂದು ಕಿರುನಗೆ ಮೂಡಿಸಲು ನಾನು ಸಿದ್ಧ. ನನ್ನದೊಂದು ಚಿಕ್ಕ ಕಾರ್ಯದಿಂದ ಬೇರೊಬ್ಬರಿಗೆ ಸಂತಸ ಸಿಗುವಂತಾದರೆ ನಾನದಕ್ಕೆ ಸದಾ ರೆಡಿ". ಇದೂ ಒಂದು ದೈವತ್ವದ ಭಾಗವೇ. "ದೇವ ಮಾನವ' ರೆನ್ನುವದು ಇಂಥವರಿಗೇ.
ಅಂತೆಯೇ ನಾವು ದೇವರನ್ನು ಕಾಣಬಹುದಾದ ಇನ್ನಿತರ ತಾಣಗಳೆಂದರೆ,_
ಏನೂ ಅರಿಯದ ಹಸುಗೂಸಿನಲ್ಲಿ,..
ಒಂದು ಉದಾತ್ತ ಭಾವದಲ್ಲಿ,..
ಒಂದು ಸಹಾಯ ಹಸ್ತದಲ್ಲಿ,..
ಅನುಕಂಪ, ಸಹಾನುಭೂತಿಗಳಲ್ಲಿ,..
ಅಳುವವರಿಗೆ ಹೆಗಲು ಕೊಟ್ಟವರಲ್ಲಿ..
ಇತರರ ಅಳಲಿಗೆ ಕಿವಿಯಾಗುವವರಲ್ಲಿ..
ಅಸಹಾಯಕರ ಊರುಗೋಲಾಗುವದರಲ್ಲಿ..
ಅಶಕ್ತರ ಕಣ್ಣೊರೆಸುವಲ್ಲಿ...
ದೇವರಿದ್ದಾನೆ...
ಎಲ್ಲ ಕಡೆಯಲ್ಲೂ...
ಎಲ್ಲ ಕಾಲಕ್ಕೂ..
ಎಲ್ಲರಿಗೂ..
Sunday, 27 December 2020
16. ಸತ್ಯಕ್ಕೆ ಸುಖವಿಲ್ಲ... ಸುಳ್ಳಿಗೆ ಸಾವಿಲ್ಲ...
ಇಲ್ಲ... ಇಲ್ಲ... ನಾನು ಮರೆತು ಬರೆದದ್ದಲ್ಲ... ಮೈತುಂಬ ಎಚ್ಚರ ಇಟ್ಟುಕೊಂಡೇ ಬರೆದದ್ದು...ಗೊತ್ತಿದೆ ಬರೆದದ್ದು ಉಲ್ಟಾ ಆಗಿದೆ. ಆದರೆ ಉಲ್ಟಾ ಜಗತ್ತಿನಲ್ಲಿ ಇದು ಸರಿಯಾಗಿಯೇ ಇದೆ.
'ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ' _ ಇದನ್ನು ಪ್ರೈಮರಿ ಸ್ಕೂಲ್ನಲ್ಲಿ ನೂರು ಸಲ ಕಾಪಿ ಪುಸ್ತಕದಲ್ಲಿ ಬರೆದಿದ್ದೇನೆ. ವಿಚಾರ ವಿಸ್ತರಿಸಿರಿ' - ಯಲ್ಲಿ ಪುಟಗಟ್ಟಲೇ ವಿಸ್ತರಿಸಿದ್ದೇನೆ. ಹಾಗೇ ನಂಬಿ ಬಾಲ್ಯ ಮುಗಿದಾಗಿದೆ. ಇತರರೂ ಹಾಗೆಯೇ ಇರುತ್ತಾರೆಂಬ ಭ್ರಮೆಯಲ್ಲೂ ದಿನಗಳನ್ನು ಕಳೆದಾಗಿದೆ. ದೊಡ್ಡವರಾದಂತೆ ಈ ಕಠೋರ ಜಗತ್ತು ಕಲಿಸಿದ ಪಾಠಗಳೇ ಬೇರೆ.
ಸತ್ಯ ಹೇಳುತ್ತ ಹೋದರೆ ಹರಿಶ್ಚಂದ್ರನಂತೆ ಹೆಂಡತಿ ಮಕ್ಕಳನ್ನು ಮಾರಿಕೊಳ್ಳಬೇಕಾಗುತ್ತದೆ. ಸ್ವಂತಕ್ಕೆ ಸುಡುಗಾಡೂ ಕಾಯಬೇಕಾಗಬಹುದು. ಬಾಪೂಜಿಯವರಂತೆ ಗುಂಡಿಗೆ ಎದೆಯೊಡ್ಡಿ ಸಾಯಬೇಕಾಗಬಹುದು. ಬದುಕಬೇಕೆ? ಹಾಗಿದ್ದರೆ ಸುಳ್ಳು ರೂಢಿಸಿಕೊಳ್ಳಿ. ಮುಖದ ಮೇಲೊಂದು ತುಂಟ ಕಿರುನಗೆಯಿರಲಿ ಜನರನ್ನು ಪಟಾಯಿಸಲು. ನಿಮ್ಮ ಮಾತು ನಡತೆಗಳಿಗೆ ಸಂಬಂಧವಿರಬೇಕಾಗಿಲ್ಲ. ಆಡಿದಂತೆ ನಡೆಯಬೇಕಿಲ್ಲ. ಸಂದರ್ಭಕ್ಕೆ ತಕ್ಕಂತೆ ದಾಳ ಉರುಳಿಸಿ ಆಡಿ, ಚಿತ್ತೂ ನಿಮ್ಮದೇ. ಪಟ್ಟೂ ನಿಮ್ಮದೇ ಆಗುವಂತೆ ಆಟದಲ್ಲಿ ಪಳಗಿರಿ. ಯಾರು ಏನಂದುಕೊಂಡಾರು ಎಂಬುದನ್ನು ಬುದ್ಧಿಯ ಗಡಿದಾಟಿಸಿ. ಜಗತ್ತು ನಿಮ್ಮ ಮುಷ್ಟಿಯಲ್ಲಿ ಬರದಿದ್ದರೆ ಹೇಳಿ.
ಚಿಂತಿಸಬೇಡಿ. ಮೊದಲಿನ ಕಾಲದಂತೆ ಇವು ಕೆಟ್ಟ ಗುಣಗಳಲ್ಲ. ಜನ ನಿಂದಿಸುವದೂ ಇಲ್ಲ. ಚಾಣಾಕ್ಷರೆಂದು ಹೊಗಳುತ್ತಾರೆ.
ಇಂದಿನ ಜಗತ್ತಿನಲ್ಲಿ ಇವೇ ಜೀವನದ ಕೌಶಲ್ಯಗಳು. ಮಕ್ಕಳಿಗೆ ಹೇಳಿಯಾರು," ____ನ್ನು ನೋಡಿ ಕಲಿತು ಕೋ, ಎಷ್ಟು ಚಾಣಾಕ್ಷ !ಎಂಥ ಚಂದದ ಮಾತು!!ನೀನೂ ಇದ್ದೀಯಾ ದಂಡಪಿಂಡಕ್ಕೆ". ಅಂದಾರು...
ಅದರರ್ಥ ಸತ್ಯಕ್ಕೆ ಬೆಲೆಯೇ ಇಲ್ಲವೆಂದಲ್ಲ, ಇದೆ. ಆದರೆ ಅದು ಸುಳ್ಳಿನಷ್ಟು ತತ್ ಕ್ಷಣಕ್ಕೆ ಫಲ ಕೊಡುವುದಿಲ್ಲ. ಸತ್ಯವೆಂಬುದು ಹುಟ್ಟಿ ಉಸಿರು ಬಿಡುವದರಲ್ಲಿ ಸುಳ್ಳು ಬ್ರಹ್ಮಾಂಡದ ಮೂರು ಪ್ರದಕ್ಷಿಣೆ ಸುತ್ತು ಮುಗಿಸುವದು ಪಕ್ಕಾ. ಹೀಗಾಗಿ ಒಮ್ಮೊಮ್ಮೆ ಸಿಕ್ಕ ಫಲವನ್ನು ಆನಂದಿಸಲಾರದಷ್ಟು ಕಾಲ ವಿಳಂಬವಾಗಿರುತ್ತದೆ. ಅದು ಯುಧಿಷ್ಟಿರನಿಗೆ ಸಾಮ್ರಾಜ್ಯ ಮರಳಿ ಸಿಕ್ಕಂತೆ. ವನವಾಸ, ಅಜ್ಞಾತ ವಾಸಗಳಾದಮೇಲೆ, ಅರ್ಜುನನಂಥವರು ಗೆಜ್ಜೆ ಕಟ್ಟಿಕೊಂಡಮೇಲೆ, ಭೀಮನಂಥವರು ಸೌಟು ಹಿಡಿದಮೇಲೆ, ಯುಧಿಷ್ಟಿರನಂಥವರು ರಾಜಸಭೆಯಲ್ಲಿ ಹೆಂಡತಿಯ ಮಾನಹರಣ ಕಣ್ಣಾರೆ ಕಂಡಮೇಲೆ, ಅಭಿಮನ್ಯುನಂಥ ಎಳೆಯರ ಬಲಿ ಕೊಟ್ಟಮೇಲೆ, ಒಂದು ರೀತಿಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಕಳೆದುಕೊಂಡು ಒಂಟಿಯಾಗಿ , ನಾಯಿಯೊಂದಿಗೆ ಸ್ವರ್ಗ ಪ್ರವೇಶ ಮಾಡಿದಂತೆ.
ಅನೇಕ ಸಲ ಇಷ್ಟೂ ಲಭ್ಯವಾಗುವದಿಲ್ಲ. ಅಗಸನದೊಂದು ಆಡುಮಾತು, ಸುಳ್ಳೇ ಇದ್ದರೂ ಪಟ್ಟದ ರಾಣಿಗೆ ದಟ್ಟಡವಿಯನ್ನು ತೋರಿಸಬಲ್ಲದು. ರಾಜನ ಮಕ್ಕಳು ಎಲ್ಲ ಇದ್ದೂ ಋಷಿಯ ಗುಡಿಸಲಲ್ಲಿ ಅನಾಥ ರಾಗಿ ಬೆಳೆಯಬೇಕಾಗಬಹುದು. ಪತಿವೃತೆಯಂದು ಜಗತ್ತೇ ಅರಿತಿದ್ದರೂ ಒಬ್ಬ ನಿಷ್ಪಾಪಿ ಹೆಣ್ಣುಮಗಳು ಬೆಂಕಿಯಲ್ಲಿ ಹಾಯ್ದು ಬೇಯದೇ ಹೊರಬಂದು ಅದನ್ನು ಸಿದ್ಧಮಾಡಿ ತೋರಿಸಬೇಕಾಗಬಹುದು. ಇವು ಪುರಾಣಕಾಲದ ರಾಜಮನೆತನದವರ ಕಥೆಗಳು ಎಂದರೂ ಇಂದಿಗೂ ಸನ್ನಿವೇಶಗಳು ಬದಲಾಗಿಲ್ಲ, ಜನ ಬದಲು...ಕಾಲ ಬದಲು... ಸುಳ್ಳು, ಸತ್ಯಗಳ ವ್ಯಾಖ್ಯಾನಗಳು ಬದಲು... ಅಷ್ಟೇ.
ಆದರೆ ಜನ ಜಾಣರಾಗಿದ್ದಾರೆ. ತಮಗೆ ಬೇಕಾದಂತೆ ಸತ್ಯ, ಸುಳ್ಳುಗಳ ಪರಿಭಾಷೆ ಬದಲಿಸಿಕೊಂಡಿದ್ದಾರೆ...
ಲಾಭಕ್ಕಾಗಿ ಸನ್ಯಾಸಿಯಾದ ರಾವಣರು, ಸೀಮಾರೇಖೆ ದಾಟಿದ ಸೀತೆಯರು, ಜೂಜಿಗಾಗಿ ಯಾರನ್ನೂ ಪಣಕ್ಕೊಡ್ಡಬಲ್ಲ ಯುಧಿಷ್ಟಿರರು, ಮಾಯಾ ಜಿಂಕೆರೂಪದಲ್ಲಿ ದಿಕ್ಕು ತಪ್ಪಿಸಿ ಕಂಗೆಡಿಸುವ ಮಾರೀಚರು, ಮುಂತಾದ ಯಾರೆಲ್ಲ ಕಾಣಸಿಗುತ್ತಾರೆ.
ಆದರೆ ಅವರನ್ನು ಗುರುತಿಸಲು, ಬೇರ್ಪಡಿಸಿ ದೂರವಿರಿಸಲು ಬೇಕಾದ ಸತ್ಯ_ ಸುಳ್ಳಗಳ ನಡುವಣ ಗೆರೆ ಕಣ್ಣಿಗೆ ಗೋಚರಿಸದಷ್ಟು...ಮಸುಕು...ಮಸುಕು.
15 . All that glitters is not gold...
ಅದೊಂದು ಫ್ರಾನ್ಸ ದೇಶದ
ಸಂಸ್ಥಾನ ರಾಜ್ಯ. ಅದರ ದೊರೆ( Count) ತುಂಬಾ ಸ್ಫುರದ್ರೂಪಿ. ಪ ರಾಕ್ರಮಿ. ಪ್ರಜಾಪ್ರೇಮಿ. ಯಾವ ಹೆಣ್ಣೂ ಅಂಥವನೇ ಗಂಡನಾಗಲಿ ಎಂದು ಬಯಸುವಂಥ ಸಚೇತನ ವ್ಯಕ್ತಿತ್ವದವ. ಆದರೆ ಅವನಿಗಾಗಲೇ ಹೆಣ್ಣು ಗೊತ್ತಾಗಿತ್ತು. ಅವಳೋ ಈಗಾಗಲೇ ಸಂತೋಷದ ಗರಿಮಾವಸ್ಥೆಯಲ್ಲಿದ್ದು ಮದುವೆಗೆ ದಿನ ಎಣಿಸುತ್ತಾ ಇದ್ದಳು. ಆ ಕಾಲದಲ್ಲಿ ರಾಜ ಮನೆತನದವರಿಗೆ ROYAL SPORTS ಮುಖ್ಯ ಮನೋರಂಜನೆಯಾಗಿತ್ತು.
ಯುದ್ಧ, ಸಾವು, ಕೊಲ್ಲುವದು, ರಕ್ತಪಾತ ಅತಿ ಸಾಮಾನ್ಯವಾಗಿದ್ದ ಅವರಿಗೆ royal sports ವಿಲಾಸದ ವಿಷಯವಾಗಿತ್ತು. ದೊಡ್ಡ ದೊಡ್ಡ Arena ಗಳಲ್ಲಿ ಹಿಂಸ್ರ ಪಶುಗಳನ್ನು ಬಿಟ್ಟು, ಅವುಗಳಿಗೆ ಎದುರಾಗಿ ಅಪರಾಧಿಗಳನ್ನು, ಮರಣ ದಂಡನೆಗೊಳಪಟ್ಟವರನ್ನು, ದೇಶದ್ರೋಹಿಗಳನ್ನು ಬಿಡುತ್ತಿದ್ದರು .ಅವರ ಅದೃಷ್ಟ ಚನ್ನಾಗಿದ್ದರೆ ಆ ಪ್ರಾಣಿಗಳೊಡನೆ ಸೆಣಸಿ ಚಾಣಾಕ್ಷತೆಯಿಂದ ಜೀವ ಉಳಿಸಿಕೊಳ್ಳಬೇಕು. ಇಲ್ಲವೇ ಸಾವಿರಾರು ಜನರ ಸಮಕ್ಷಮ ಅತ್ಯಂತ ಕ್ರೂರ ರೀತಿಯಲ್ಲಿ ಸಾವನ್ನಪ್ಪಬೇಕು.
ಸುರಕ್ಷಿತ ವಲಯಗಳಲ್ಲಿ, ಸಂಪೂರ್ಣ ರಕ್ಷಣೆಯೊಂದಿಗೆ ರಾಜ ಪರಿವಾರ, ನಗರದ ಗಣ್ಯರು, ಆಮಂತ್ರಿತರ ಸಮ್ಮುಖದಲ್ಲಿ ನಡೆಯುವ ಈ ಕ್ರೀಡೆಗೆ ಆ ಕಾಲದಲ್ಲಿ ವಿಶೇಷ ಸ್ಥಾನಮಾನ.
ಇಂಥ ಒಂದು ರಾಜಮನೆತನದ ಕ್ರೀಡೆಗೆ ಮೇಲೆ ಹೇಳಿದ ರಾಜ,ಹಾಗೂ ಅವನಿಗೆ ಗೊತ್ತಾದ ರಾಜಕುಮಾರಿ ಕೂಡ ಆಮಂತ್ರಿತರಾಗಿದ್ದರು. ಆಟದ ಮಧ್ಯಭಾಗ. ಒಳ್ಳೇ ತುರುಸಿನಿಂದ ನಡೆದು ನೋಡುಗರ ರಕ್ತ ಹೆಪ್ಪುಗಟ್ಟಿದ ವೇಳೆ. ರಾಜಕುಮಾರಿಗೆ ತನ್ನ ಭಾವೀ ಪತಿಯ ಪರಾಕ್ರಮ ಪ್ರದರ್ಶಿಸಲು ಅದು ಅತ್ಯಂತ ಸೂಕ್ತ ಸಮಯ ಅನಿಸಿತು. ಅದನ್ನು ಬಳಸಿ ನೆರೆದ ಗಣ್ಯರ ಕಣ್ಣಿನಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳ ಬೇಕೆಂಬ ಹುಚ್ಚಿನಲ್ಲಿ ತಾನೇನು ಮಾಡುತ್ತಿದ್ದೇನೆ ಎಂಬ ಪರಿಜ್ಞಾನವಿಲ್ಲದೇ ತನ್ನ ಇನಿಯ ಕೊಡಿಸಿದ ಅತ್ಯಂತ ಬೆಲೆಬಾಳುವ ಕೈ ಗವುಸನ್ನು( Gloves) ಆಖಾಡಕ್ಕೆ ಜಾರಿಸಿ ತನ್ನ ಭಾವೀ ಗಂಡನ ಕಡೆ ಆಶಾ ಭಾವದಿಂದ ನೋಡಿದಳು. ರಾಜನಿಗೆ ದಿಗ್ಭ್ರಾಂತಿಯಾದರೂ ಅವಳ ಇಂಗಿತ ತಿಳಿಯಿತು. ಕ್ಷಣ ಕೂಡ ಯೋಚಿಸದೇ ಆಹ್ವಾನ ಸ್ವೀಕರಿಸಿ ಮಿಿಂಚಿನಂತೆ ಕೆಳಗೆ ಹಾರಿ ಏನಾಗುತ್ತಿದೆ ಎಂಬುದು ಇತರರಿಗೆ ತಿಳಿಯುವ ಮೊದಲೇ ಕೈ ಗವುಸು ಎತ್ತಿಕೊಂಡು ಸ್ವಸ್ಥಾನ ಸೇರಿದ.ನೆರೆದ ಜನಕ್ಕೆ ಇದೆಲ್ಲ ಅಯೋಮಯ. ಏನಾಗುತ್ತಿದೆ? ನಡೆದದ್ದು ನಂಬ ಬೇಕೇ? ಬೇಡವೇ ಎನ್ನುವ ಗೊಂದಲದಲ್ಲಿರುವಾಗಲೇ ಆ ರಾಜ ಕೈ ಗವುಸನ್ನು ಎತ್ತಿ ತಂದು ಅವಳ ಮೇಲೆ ಎಸೆದು ಹೇಳಿದ,-
" ನನಗೆ ಈ ಪರಾಕ್ರಮದ ಅವಕಾಶ ಕೊಟ್ಟುದಕ್ಕೆ ಹಾರ್ಧಿಕ ಧನ್ಯವಾದಗಳು. ಅದನ್ನು ಮಾಡಿದ್ದರ ಬಗ್ಗೆ ನನಗೆ ಖುಶಿಯಿದೆ, ಗರ್ವವಿದೆ .ಆದರೆ ಇಂಥ ಒಂದು ಕ್ಷುಲ್ಲಕ ವಸ್ತುವಿಗಾಗಿ ನೀನಿದನ್ನು ಮಾಡಿಲ್ಲ ಎಂಬ ಅರಿವು ನನಗಿದೆ.ಸ್ವ ಪ್ರತಿಷ್ಠೆ, ಸು
ಳ್ಳು ಅಂತಸ್ತಿಗಾಗಿ, ಕೆಲಕ್ಷಣಗಳ "ವ್ಹಾವ್ಹಾ" ಗಾಗಿ ಪ್ರಾಣಪ್ರಿಯನ ಜೀವವನ್ನೇ ಪಣಕ್ಕಿಡುವ ಹೃದಯಕ್ಕೆ ನಿಜವಾದ ಪ್ರೀತಿ ಇರುವದಿಲ್ಲ. ಪ್ರತಿಷ್ಠೆ ಮೆರೆಯುವದಕ್ಕಾಗಿ ಬೇರೊಬ್ಬರ ಶೌರ್ಯವನ್ನು ಪರೀಕ್ಷೆಗೊಡ್ಡಲು ತಯಾರಾಗುವ ಹೆಣ್ಣು ತನ್ನ ಹೊರತಾಗಿ ಬೇರೆ ಯಾರನ್ನೂ ಪ್ರೀತಿಸಲು ಸಾಧ್ಯವೇಯಿಲ್ಲ. ಅಂಥವಳ ಬದುಕಿನಲ್ಲಿ ಅಲಂಕಾರದ ಗೊಂಬೆಯಾಗುವದು ನನಗೆ ಸರ್ವಥಾ ಸಮ್ಮತವಿಲ್ಲ .ನಾನು ನಿನ್ನನ್ನು ಸ್ವತಂತ್ರಗೊಳಿಸಿದ್ದೇನೆ. ನೀನು ಬೇಕಾದವರನ್ನು ಮದುವೆ ಆಗಬಹುದು"ಎಂದು ಹೇಳಿ ರಾಜ ಜಾಗ ಖಾಲಿ ಮಾಡಿದ...
ಇದು GLOVE ಎಂಬ ಒಂದು ಪದ್ಯ. ಇಂಗ್ಲಿಷನಲ್ಲಿ ಹತ್ತನೇ ವರ್ಗದವರಿಗಿತ್ತು. ಕಲಿಸಿ ಇಪ್ಪತ್ತು ವರ್ಷಗಳ ಮೇಲಾದಮೇಲೂ ಮರೆಯದೇ ಸೂಕ್ತ ಸಂದರ್ಭಗಳಲ್ಲಿ ನೆನಪಾಗುತ್ತದೆ. ಕವಿಗೆ ಸಾವಿದೆ..
ಕವನಗಳಿಗಲ್ಲ. ಅವು ಕಲಿಸುವ ಪಾಠಗಳಿಗಲ್ಲ್ಲ .ಇದರಲ್ಲಿ ಒಂದು ಘಟನೆ ಒಂದು ಬದುಕಿನ ಸತ್ಯ ದರ್ಶನಕ್ಕೆ ದೃಷ್ಟಾಂತವಾಗಿ ಬಳಕೆಯಾಗಿದೆ ಅಷ್ಟೇ. ಕಥೆ ಮರೆಯ ಬಹುದು..ಅಥವಾ ಬೇರೊಂದು ಘಟನೆಯಲ್ಲಿ, ಬೇರೊಂದು ಉದಾಹರಣೆ ಸಮೇತ ಬೇರೊಂದು ಘಟನೆ ಪುನರಾವರ್ತಿತ ವಾಗಬಹುದು..ಆದರೆ,
ಸದಾ ತನ್ನನ್ನಷ್ಟೇ ಗಮನದಲ್ಲಿಟ್ಟುಕೊಳ್ಳುವ, ತನ್ನ ಸ್ವಾರ್ಥಕ್ಕಾಗಿ ಅನ್ಯರನ್ನು ಅಪಾಯಕ್ಕೊಡ್ಡುವ ಯಾವ ಜೀವಕ್ಕೂ ಪ್ರೀತಿಯೆಂಬುದೊಂದು' 'ಮಿಡಿತ' 'ಭಾವ' 'ಸಂವೇದನೆ ' ಅಲ್ಲವೇ ಅಲ್ಲ.. ಅದೊಂದು ಆಡಂಬರ. ಪ್ರದರ್ಶನ. ಅವಕಾಶ...
14. ಇಂತಜಾರ್ ಮೇಲೆ ಜೋ ಮಜಾ ಹೈ, ವೋ ಪಾನೇ ಮೇಲೆ ನಹೀಂ...
"ನಾನೊಂದು ದಿನ ಪೇಟೆಯಲ್ಲಿ ಒಂದು ಚಂದದ bird feeder ಕಂಡೆ .ತುಂಬಾ ಮುದ್ದೆನಿಸಿತು. ತಡವೇಕೆ? ಖರೀದಿಸಿ ಆಯಿತು .ಮನೆಗೆ ಬಂದೊಡನೇ ಅದರಲ್ಲಿ ಕಾಳು ತುಂಬಿಸಿ ಮನೆಯ ಹಿಂಭಾಗದಲ್ಲಿ ಕಟ್ಟಿದೆ. ನಮ್ಮ ಹಿತ್ತಲೂ ಚಿಕ್ಕದೇ. ಆಶೆ ದೊಡ್ಡದಿತ್ತು. ಆಗಾಗ ಹಣಿಕಿಕ್ಕಿ ನೋಡುತ್ತಿದ್ದೆ , ಪುಟ್ಟ ಹಕ್ಕಿಗಳ ನಿರೀಕ್ಷೆಯಲ್ಲಿ. ನನಗೇನೂ ನಿರಾಶೆಯಾಗಲಿಲ್ಲ. ಮೂರು ನಾಲ್ಕು ದಿನಗಳಲ್ಲಿ ಹಕ್ಕಿಗಳ ಸಂಖ್ಯೆ ಕ್ರಮೇಣ ಏರುತ್ತ ಹೋಗಿ ಸಾಕಷ್ಟು ಬೆಳೆಯಿತು. ದಿನಾಲೂ ಅನಾಯಾಸವಾಗಿ ಸಿಗುತ್ತಿದ್ದ ವಿವಿಧ ಕಾಳುಗಳ ಆಕರ್ಷಣೆ ಎಷ್ಟಿತ್ತೆಂದರೆ ನಿಧಾನವಾಗಿ ಎಲ್ಲೆಂದರಲ್ಲಿ ತಮ್ಮ ಗೂಡು ಕಟ್ಟಿ ವಸಾಹತು ಶಾಹಿಗಳಾಗತೊಡಗಿದವು.
ನಿಜವಾದ ತೊಂದರೆ ಶುರುವಾದದ್ದು ಆವಾಗಲೇ. ಎಲ್ಲ ಕಡೆ ಅವುಗಳ ಹಿಕ್ಕೆಗಳು, ಹೊಲಸು. ಅದನ್ನು ಸ್ವಚ್ಛಗೊಳಿಸುತ್ತ ಕೂಡುವದು ನಿತ್ಯ ಕೆಲಸ .ಕ್ರಮೇಣ ಕೆಲವು ಹಕ್ಕಿಗಳು ತಮ್ಮ ಹಕ್ಕು ಸಾಧಿಸತೊಡಗಿದವು. ಒಮ್ಮೆಲೇ ಹಾರಿಬಂದು ಅಲ್ಲಿಯೇ ಕುಳಿತ ನನ್ನನ್ನು ಕುಕ್ಕಲು ನೋಡುವದು ಪ್ರಾರಂಭವಾಯಿತು.
ಇನ್ನು ಕೆಲವು, ಕಾಳು ಕೊಂಚವೇ ಕಡಿಮೆಯಾದರೂ, ಕೂಗಿ, ಚೀರಿ ಗದ್ದಲವೆಬ್ಬಿಸಿಬಿಡುತ್ತಿದ್ದವು. Bird feeder ಮೇಲೆ ಕುಳಿತು ಹಗಲು ರಾತ್ರಿಯನ್ನದೇ ಕೂಗುತ್ತ ಮನೆಯ ಶಾಂತಿಗೆ ಭಂಗ ತರತೊಡಗಿದವು..
ಕೆಲ ದಿನಗಳನಂತರ ನನಗೆ ಹೊರಗೆ ಬಂದು ಕೂಡುವದೂ ದುಸ್ತರವಾಯಿತು. ಆಗ bird feeder ತೆಗೆದೇ ಹಾಕುವ ನಿರ್ಧಾರಕ್ಕೆ ಅನಿವಾರ್ಯವಾಗಿ ಬರಬೇಕಾಯಿತು. ತೆಗೆದೇಬಿಟ್ಟೆ. ಎರಡು ಮೂರು ದಿನಗಳಲ್ಲಿ ಹಕ್ಕಿಗಳು ಪರ್ಯಾಯ ಹುಡುಕಿಕೊಂಡು ಹೋದವು .ನಾನು ಪೂರ್ತಿ ಹಿತ್ತಲು ಸ್ವಚ್ಛಗೊಳಿಸಿದೆ. ಗೂಡುಗಳನ್ನು ತೆಗೆದೆ. ಕೆಲವೇ ದಿನಗಳಲ್ಲಿ ಮನೆ ಮೊದಲನೇ ರೂಪ ಪಡೆದಾಯಿತು. ಅದೇ ಶಾಂತ, ನೀರವ, ವಾತಾವರಣ ನಮ್ಮದಾಯಿತು"
ನಮ್ಮ ಬದುಕೂ ಇದಕ್ಕಿಂತ ತೀರ ಭಿನ್ನವೇನೂ ಇಲ್ಲ. ಸಮಾಜ ಜೀವಿಯಾದ ನಮಗೆ ನಮ್ಮವರು, ತಮ್ಮವರು ಬೇಕೆನಿಸುತ್ತದೆ. ಸ್ನೇಹ ಬೆಳೆಸುತ್ತೇವೆ. ಹೆಚ್ಚು ಹೆಚ್ಚು ಹಚ್ಚಿಕೊಂಡಂತೆ ಸದರ ಹೆಚ್ಚಾಗಿ ಎಲ್ಲದರಲ್ಲೂ ಅವರನ್ನು ಸೇರಿಸಿಕೊಂಡು ಅವರೂ ನಮ್ಮವರೇ ಎಂಬ ಭಾವ ಬೆಳೆಯುತ್ತದೆ. ಆಗ ಇರಬೇಕಾದ ಒಂದು ಸೀಮಾರೇಖೆ ಇಲ್ಲದಿದ್ದರೆ ಅವರು ಅತಿಕ್ರಮಿಸಿ ನಮಗೇನೇ ಹೊರದಾರಿ ತೋರಿಸುತ್ತಾರೆ. ಎಲ್ಲದರಲ್ಲೂ ಮೂಗು ತೂರಿಸುತ್ತಾರೆ. ಅನುಚಿತ ಸಲಿಗೆ ಪಡೆದು ನಮನ್ನೇ ಕಷ್ಟಕ್ಕೆ ಸಿಲುಕಿದರೂ ಅಚ್ಚರಿಯೇನಿಲ್ಲ. "ಅಯ್ಯೋಪಾಪ, " ಹೊರಗೆ ಚಳಿ - ಗಾಳಿಯಿದೆಯಂದು ಒಂಟೆಗೆ tent ನಲ್ಲಿ ಕೊಂಚ ಜಾಗ ಕೊಟ್ಟರೆ ಕ್ರಮೇಣ ತುಸುತುಸು ಒಳಗೆ ನುಸುಳಿ ಇನ್ನೊಂದು ಬಾಗಿಲಿನಿಂದ ಅರಬನೇ ಹೊರಗೆ. ಆಗ ನಮಗೇ ಯಾರಾದರೂ "ಅಯ್ಯೋ ಪಾಪ" ಅನ್ನಬೇಕಾದೀತು. ಹಾಗೆ ಆದದ್ದೇ ಆದರೆ ನಮ್ಮ ಮನೆಗೆ ನಾವೇ ಆಗಂತುಕರಾಗುವ ಕಾಲ ಸನ್ನಿಹಿತ ವಾದಂತೆಯೇ.
ಆಗ ನಾವೂ ಹುಶಾರಾಗಿ ನಾವೇ ಕಟ್ಟಿದ bird feeder ನ್ನು ದೂರ ಎಸೆದು, ಮನೆಯನ್ನು ಚೊಕ್ಕಟ ಗೊಳಿಸದಿದ್ದರೆ ನಮ್ಮ ಮನೆಯೇ ನಮಗೆ ಪರಕೀಯವೆನೆಸಿ ಬದುಕನ್ನು ದುರ್ಭರವೆನಿಸುವ ಆಪತ್ತು ಬಗಲಲ್ಲೆ ಸದಾಕಾಲ ಇಟ್ಟುಕೊಂಡಂತೆ...
13. ಸಹಾಯ ಮಾಡುವವರ ' ಅಸಹಾಯಕತೆ.
13. "ಸಹಾಯ ಮಾಡಬೇಕೆಂಬುವವರ' 'ಅಸಹಾಯ' ಕತೆ..."
ನಾನು ಕೆ,ಇ,ಬೋರ್ಡ ಶಾಲೆಯಲ್ಲಿ ಟೀಚರ್ ಆಗಿದ್ದಾಗಿನ ಮಾತು. ಒಂದೆರಡು ವರ್ಷ ನಾನು admission committee ಯಲ್ಲಿ ಇದ್ದೆ. ಆಗ ಹಾಗೆ ಇದ್ದವರಿಗೆಲ್ಲ ಒಂದು ಅಥವಾ ಎರಡು seat ಗಳ ಕೋಟಾದ ಸ್ವಾತಂತ್ರ್ಯವಿರುತ್ತಿತ್ತು. ಅನಿವಾರ್ಯದ emergency ಏನಾದರೂ ಬಂದರೆ ಎಂದು. ಅದು ಅವರವರ ವಿವೇಚನೆಯ ಬಳಕೆಗೆ. ಯಾರೂ ಅವುಗಳ ದುರುಪಯೋಗವೇನೂ ಮಾಡಿಕೊಳ್ಳುತ್ತಿರಲಿಲ್ಲ. ಕೊನೆಯ ಗಳಿಗೆಯ ಆಪತ್ಕಾಲೀನ ಸೀಟುಗಳು ಅವು. ಒಂದು ವೇಳೆ ಅಂಥ ಪ್ರಸಂಗ ಬರದಿದ್ದರೆ waiting list ನಲ್ಲಿ ಇದ್ದವರಿಗೆ ಮುಖ್ಯಾಧ್ಯಾಪಕರ ಅನುಮತಿಯೊಂದಿಗೆ ಪ್ರವೇಶ ಕೊಡಬೇಕಾಗುತ್ತಿತ್ತು.
ಒಂದು ವರ್ಷ ಅತಿ ಪರಿಚಯದವರು ಬಂದು ಗೋಗರೆದಾಗ ಒಂದು ವಾರ ವೇಳೆ ತೆಗೆದುಕೊಂಡು ಸರ್ ಗಮನಕ್ಕೂ ತಂದು ಅವರ ಒಪ್ಪಿಗೆಯೊಂದಿಗೆ ಅವರಿಗೆ allot ಮಾಡಿದ್ದಾಯಿತು. ಅವರಿಗೆ ಮತ್ತೆ ಮತ್ತೆ ವಿಷಯ ತಿಳಿಸಿ ಕಾದದ್ದಾಯ್ತು. ಹದಿನೈದು ದಿನಗಳಾದರೂ ಸುದ್ದಿಯೇ ಇಲ್ಲ. ಪದೇ ಪದೇ ಫೋನ್ ಮಾಡಿ ಹೇಳಿಯಾಯಿತು .ಉತ್ತರವಿಲ್ಲ.ಕೊನೆಗೆ ತಿಳಿದು ಬಂದದ್ದು ಅವರ ಹುಡುಗ ತನ್ನ ಗೆಳೆಯರನ್ನು ಬಿಟ್ಟು ಬೇರಾವ ಶಾಲೆಗೂ ಹೋಗುವದಿಲ್ಲ ಎಂದು ಅತಿಯಾಗಿಯೇ ಹಟ ಹಿಡಿದಿದ್ದರಿಂದ ಅವನನ್ನು ಒಪ್ಪಿಸಲಾರದೆ ನನ್ನನ್ನು ಎದುರಿಸಲು ಸಾಧ್ಯವೂ ಆಗದೇ ಮುಜುಗರವಾಗಿ ಮುಖ ತಪ್ಪಿಸುತ್ತಿದ್ದರು.
ಇನ್ನೊಮ್ಮೆ ದೂರದ ಬಂಧುಗಳೊಬ್ಬರಿಗೆ ಆರೋಗ್ಯ ಸಮಸ್ಯೆ ಯಾಗಿತ್ತು .ಮೊದಲು ತೋರಿಸಿದ ಡಾಕ್ಟರ್ ಆಪರೇಶನ್ ಮಾಡಲೇಬೇಕು ಎಂದಾಗ ವಯಸ್ಸು ಬಹಳ ವಾದದ್ದರಿಂದ( 80 ರ ಸಮೀಪ) second opinion ಗೆ ಬೇರೊಬ್ಬರ ಕಡೆ ಹೋಗಬೇಕಾಗಿತ್ತು . ನನ್ನ ಗೆಳತಿಯರ ಮಕ್ಕಳು, ವಿದ್ಯಾರ್ಥಿಗಳು, ಪರಿಚಯಸ್ಥರು, ದೂರದ ಬಂಧುವರ್ಗ ಗಳಲ್ಲಿ ಡಾಕ್ಟರರು ಅನೇಕರಿದ್ದುದರಿಂದ ಸಹಾಯ ಸಾಧ್ಯವೇ ಎಂಬ ಮಾತು ಬಂತು. ನಾನು ಒಬ್ಬರೊಡನೆ ಮಾತಾಡಿ, ಅವರು specialist ಡಾಕ್ಟರರೊಂದಿಗೆ visit fix ಮಾಡಿ ಬರುವ ಮುನ್ನ ಒಂದು message ಅಥವಾ call ಮಾಡಿದರೆ ತಕ್ಷಣ ಬರುವುದಾಗಿ ಮಾತು ಕೊಟ್ಟರು.
ಆದರೆ ಅವರಿಗೆ ಅಚಾನಕ್ ಆಗಿ ಬೇರೊಬ್ಬರ ಸಹಾಯ ಹೊತ್ತಿಗೆ ದೊರೆತು ನನ್ನವರೆಗೆ ಆ ಮಾತು ಬರಲೇಯಿಲ್ಲ. ನಾನು ನಂತರ ಸಂಬಂಧಿಸಿದ ಡಾಕ್ಟರ್ ಅವರಿಗೆ ಒಂದು sorry ಹೇಳಿ ಕ್ಷಮೆ ಕೇಳಿದೆ.
ಮೇಲಿನವೆರಡೂ ಅಘಟಿತ ಘಟನೆಗಳಲ್ಲ. ಬಹಳ ಸಲ ನಡೆಯುವಂತಹವೇ. ಪ್ರತಿಯೊಬ್ಬರಿಗೂ ಸಾಮಾನ್ಯ ಅನುಭವಗಳ ಮಾತು...ಪರಿಸ್ಥಿತಿಯ ಗಾಬರಿಯಲ್ಲಿ, ಸಹಾಯ ಸಿಗದಿದ್ದರೆ ಎಂಬ ಅಪನಂಬಿಕೆಯಲ್ಲಿ, ಎಷ್ಟು ಬೇಗ ಅನುಕೂಲವಾದರೆ ಅಷ್ಟು ಚನ್ನ ಎಂಬಂಥ ಭಾವದಲ್ಲಿ ಹೀಗಾಗುವದು ಅತಿ ಸ್ವಾಭಾವಿಕ...ಅಲ್ಲದೇ ಒಂದು ಕಡೆ ಸಾಧ್ಯವಾಗದಿದ್ದರೆ, ಇನ್ನೊಂದು ಪ್ರಯತ್ನವಿರಲಿ ಎಂಬುದು ಆಪತ್ಕಾಲಕ್ಕೆ ಸೂಕ್ತವೂ ಹೌದು...
ಆದರೆ ಅದರಿಂದ ಸಹಾಯ ಕೇಳಲು ಮುಜುಗರದ ಸ್ವಭಾವವಿದ್ದು ಕೇವಲ ಸಹಾಯ ಮಾಡೋಣ ಎಂಬ ಏಕೈಕ ಉದ್ದೇಶವಿರುವವರಿಗೆ ಸ್ವಂತಕ್ಕಲ್ಲದಿದ್ದರೂ ಇನ್ನೊಬ್ಬರನ್ನು ಅದರಲ್ಲಿ ತೊಡಗಿಸಿದ್ದಕ್ಕಾಗಿಯಾದರೂ ಸ್ವಲ್ಪು ಬೇಸರವಾಗುವ ಸಾಧ್ಯತೆ ತೆಗೆದು ಹಾಕುವಂತಿಲ್ಲ. ಬೇಕೋ..ಬೇಡವೋ ಎಂದು ಅನುಮಾನಿಸಿ ಒಬ್ಬರಿಗೆ ಒಳ್ಳೆಯದಾಗಲೆಂದು ಮಾಡಿದ ಕೆಲಸ ಅಪೇಕ್ಷಿತ ಪರಿಣಾಮ ಕೊಡದಿದ್ದರೆ ಹಲವು ವಿಚಾರಗಳಲ್ಲಿ ಬೇಸರವಾಗುವದು ಅಸಹಜವೇನಲ್ಲ. ಆದರೆ ಅಂಥ ಕೆಲವು ಪ್ರಸಂಗಗಳು ಬದುಕಿನಲ್ಲಿ ಅನಿವಾರ್ಯವೆಂಬುದು ಅನುಭವ ವೇದ್ಯ ವಾಗಿರುವದರಿಂದ ಬೇಸರ ಕೆಲವೇ ಗಂಟೆಗಳದ್ದು ಎಂಬ ಸಮಾಧಾನವಾಗುವದೂ ಅಷ್ಟೇ ನಿಜ
ನಮ್ಮ ನಿಲುವಿಗೆ, ಆಗಿ ಹೋದದ್ದಕ್ಕೆ ಎಷ್ಟೇ ಸಮಾಧಾನ ಮಾಡಿಕೊಂಡರೂ ಮತ್ತೊಮ್ಮೆ ಪ್ರಸಂಗ ಬಂದಾಗ ಒಪ್ಪಿಕೊಳ್ಳಬೇಕೆ ,ಬೇಡವೇ ಎಂಬ ಒಂದು ಅಪನಂಬಿಕೆ, ಚಿಕ್ಕದೊಂದು ಸಂದೇಹ ಬಂದರೆ ಅಚ್ಚರಿಯೇನೂ ಅಲ್ಲ. ಆ ಒಂದು ಕ್ಷಣ ಮಾತ್ರ 'TO DO'....OR 'NOT TO DO' ಎಂಬುದು ಮಾತ್ರ ಉಭಯ ಪಕ್ಷಗಳಿಗೂ ಬರಬಹುದಾದ ಸ್ವಾಭಾವಿಕವಾದುದೊಂದು ಪುಟ್ಟ ಅನುಮಾನ.
ಸಹಾಯ ಕೇಳಿಬಂದವರೂ, ಮಾಡಲು ಮುಂದಾದವರೂ ಎರಡೂ ಪಕ್ಷದವರೂ ಸ್ವಲ್ಪು ತಿಳುವಳಿಕೆ ಯವರಿದ್ದಲ್ಲಿ ಮಾತ್ರ ಅವರ ನಡುವಿನ ಸಂಬಂಧಗಳು ಕೆಡದೇ ಹಾಗೇ ಉಳಿಯುತ್ತವೆ.
Saturday, 26 December 2020
12. ದಿಲ್ ಅಭೀ ಭರಾ ನಹೀಂ...
"ವೇಳೆ ಯಾರಿಗೂ ನಿಲ್ಲುವದಿಲ್ಲ. ಯಾರ ಸಲುವಾಗಿಯೂ ಕಿಂಚಿತ್ತೂ ನಿಧಾನವಾಗುವದಿಲ್ಲ. ನಮ್ಮ ನೆಪಗಳನ್ನದು ಎಂದೂ ಆಲಿಸುವದಿಲ್ಲ. ನಮ್ಮ ನಿರ್ಧಾರಗಳು, ನಮ್ಮ ಪಶ್ಚಾತ್ತಾಪಗಳು ಕೇವಲ ನಮ್ಮವಷ್ಟೇ. ಕಾಲಕ್ಕೆ ಅವು ಸಂಬಂಧವಿಲ್ಲ..ಕಾಲ ಎಂದಿಗೂ ನಮ್ಮೊಂದಿಗೆ ಅಳುತ್ತ ಕೂಡುವದಿಲ್ಲ . ಭೂತ ಬದಲಾಗದು. ಭವಿಷತ್ ನಮ್ಮ ಪರವಾನಿಗೆಗಾಗಿ ಸರ್ವಥಾ ಕಾಯುವದಿಲ್ಲ. ಕಾರಣ ಸಿಟ್ಟು, ಕೋಪ, ಪಶ್ಚಾತ್ತಾಪಗಳಲ್ಲಿಯೇ ಕಾಲ ಕಳೆಯುವುದು ಮೂರ್ಖತನ. ಇಂದು, 'ಈ ದಿನ ' ಮಾತ್ರ ನಮ್ಮದು...ಕಾರಣ ಸರಿಯಾದ ಸಮಯವನ್ನು, ಸರಿಯಾದ ಜನರೊಂದಿಗೆ, ಸರಿಯಾದ ರೀತಿಯಲ್ಲಿ ಕಳೆಯುವುದು ಬುದ್ಧಿವಂತಿಕೆ .ನಾವೇನೇ ಕೊಟ್ಟರೂ ಈ ಹೊತ್ತು ಮತ್ತೆ ಮರಳಿ ಎರಡನೇಸಲ ಬರಲಾರದು ನೆನಪಿರಲಿ.."
ಬೆಳಗಿನ ಓದು ಸಾಗಿತ್ತು.. ಎರಡುಬಾರಿ ಮೇಲಿನದನ್ನು ಓದಿದ್ದರಿಂದ ಅದೇ ಗುಂಗಿನಲ್ಲಿದ್ದೆ. ಆಗಲೇ ನಮ್ಮ ಅಂತಃಪುರ ಗುಂಪಿನದೊಂದು post ಬಂತು. ಅಕ್ಷಯ ತ್ರತೀಯದಂದು ನಮ್ಮ ಗುಂಪಿನವರದು ಬುತ್ತಿ ಭೋಜನ ಮಾಡೋಣ. ಅದು pot luck ರೀತಿ. ಒಬ್ಬೊಬ್ಬರು ಒಂದೊಂದು ಖಾದ್ಯ ತರಬೇಕು. ಆಯ್ಕೆ ಅವರದೇ. ಮನೆಯಲ್ಲಿ ಮಾಡಲು ಸಾಧ್ಯವಿಲ್ಲದವರು ಏನಾದರೂ ready ಇದ್ದುದನ್ನೂ ತರಲಡ್ಡಿಯಿಲ್ಲ.
ಏನು ತರುವಿರಿ ಎಂಬುದನ್ನು ಹೆಸರು/ ಖಾದ್ಯ/ ಕ್ರಮಸಂಖ್ಯೆ ಸಮೇತ ತಿಳಿಸಿ ಎಂದು. Venue ಮನೆಯಿಂದ ಬಹಳ ದೂರವಿತ್ತು. ನನಗೆ ಒಪ್ಪಿಕೊಳ್ಳಲು ದಿಗಿಲು. ಕೊನೆಗೆ ಅದೇ ತಾನೇ ಓದಿದ್ದನ್ನು ನೆನಪಿಸಿಕೊಂಡೆ. ಇಂದು ನನ್ನದು ,ನಂತರದ ಪಶ್ಚಾತ್ತಾಪ ಉಪಯೋಗವಿಲ್ಲದ್ದು ಎಂದು ಕೊಂಡವಳೇ ಮುಂದಿನದು ಮುಂದೆ ಎಂದು ಒಪ್ಪಿಗೆ ಹಾಕಿಯೇಬಿಟ್ಟೆ.
ನಂತರದ್ದು ಒಂದು ಸುಂದರ ಕನಸು. ಆ ದಿನ ಬರೋಬ್ಬರಿ ನಲವತ್ತು ಜನ. ಹದಿಹರಯ ದಾಟಿದವರಿಂದ ಎಂಬತ್ತು ವರ್ಷದವರವರೆಗೆ. ವಯಸ್ಸಿನ ಭೇದವಿಲ್ಲದೇ ಅದೇ ಉತ್ಸಾಹ .ಪರಸ್ಪರ ಬೆರೆಯುವಿಕೆ, ಪರಸ್ಪರ ಸಹಾಯ. ಒತ್ತಾಯ ಮಾಡಿ ಮಾಡಿ ಇದ್ದಲ್ಲೇ ಖಾದ್ಯಗಳ ಸರಬರಾಜು, ಹಾಡು ,ಕುಣಿತ, ಅದೊಂದು ಮದುವೆ ಮನೆಯೇ. ಗದ್ದಲ, ಕಲಕಲ, ಮಾತಿನಬ್ಬರ, ಎಷ್ಟು ಹೊತ್ತಾದರೂ ಇಳಿವ ಮಾತೇಯಿಲ್ಲ. ಒಬ್ಬರಿಗೊಬ್ಬರು ಘಟಾನುಘಟಿಗಳು.
ಕಾದಂಬರಿ, ಕಾವ್ಯ, ಕಥೆಗಳಲ್ಲಿ ಸಾಕಷ್ಟು ಕೃಷಿಮಾಡಿದವರು, ಯೋಗ, ಪಟುಗಳು, ಹಿರಿ ಕಿರಿ ತೆರೆಯ ಕಲಾವಿದೆಯರು, ಮಾಧ್ಯಮದ ಕಾರ್ಯಕ್ರಮ ರೂವಾರಿಗಳು, ವಾದ್ಯ ವಿದ್ವಾಂಸರು, ವೈದ್ಯೆಯರು, ವಕೀಲರು ,ವಿಮರ್ಶಕಿಯರು, ರಂಗಭೂಮಿ, ನೃತ್ಯಗಳಲ್ಲಿ ಪಳಗಿ ತಮ್ಮದೇ ಸಂಸ್ಥೆ ಕಟ್ಟಿ ಬೆಳೆಸುತ್ತಿರುವವರು, ನಾಟಕ ನೃತ್ಯ, ಯಕ್ಷಗಾನ, ಸಂಘಟನೆಗಳ ಪೋಷಕರು.
ಲಿಸ್ಟ ಮುಗಿಯುವ ಹಾಗೇಯಿಲ್ಲ. ಯಾಕಂದರೆ ಕೆಲವರು ಹಲವು ಕಲಾ ಪಾರಂಗತರು .ಸ್ವಂತ ಪರಿಚಯ ಕಾರ್ಯಕ್ರಮದಲ್ಲಿ ಬಿಚ್ಚಿಕೊಂಡ ಮಾಹಿತಿ ದಂಗು ಬಡಿಸುವಂಥದು. ಆದರೆ ಬಿಚ್ಚಿ ಹೇಳುವವರೆಗೆ ಯಾರಿಗೂ ಗೊತ್ತೇ ಮಾಡಿಕೊಡದ ಬಿಂಕು ಬಿಗುಮಾನಗಳಿಲ್ಲದ ನಿಲುವು..
ಪತ್ರಿಕೆಗಳಲ್ಲಿ ಬಂದಾಗ, ಪದವಿ, ಪ್ರಶಸ್ತಿಗಳು ದೊರಕಿದಾಗ ಮಾತ್ರ ತಿಳಿಯುವಂಥವು. ಯಾವುದೇ ವಯಸ್ಸಿನ ಅಂತರವಿಲ್ಲದೇ ಬೆರೆಯುವ, ಬೇಕಾದ ಸಹಾಯ ಮಾಡಬಹುದಾದ ನಿರ್ಮಲ ಮನಸ್ಸು ಎಲ್ಲರದು.
ನಾವಾಯಿತು, ನಮ್ಮ ಕೆಲಸವಾಯಿತು ಎಂಬ ನಿಲುವು ಬದಲಿಸಿ ಸ್ವಲ್ಪು ಹೊರಜಗತ್ತಿಗೆ ತೆರೆದುಕೊಂಡರೆ ಆಗುವ ಲಾಭ ಗಣನೀಯ. ವ್ಯಕ್ತಿತ್ವ ವಿಕಸನಕ್ಕೆ ರಹದಾರಿ. ಮನಷ್ಯರ ನಡುವಳಿಕೆಯ ಪರಿಚಯ, ಸಮಯದ ಸದುಪಯೋಗ ಸ್ವಂತ ವ್ಯಕ್ತಿತ್ವದ ಅನಾವರಣ,ಹೊಸದನ್ನು ಅರಿಯಲು ಸುಯೋಗ, ನಾವೇ ಬಲ್ಲವರು ಎಂದು ಬೀಗುವ ನಮ್ಮಂಥವರಿಗೆ ಒಮ್ಮೊಮ್ಮೆ ಪಾಠ ,ನಮ್ಮ ಯೋಗ್ಯತೆ ತಿಳಿಸುವ, ದಿನನಿತ್ಯದ ಬದುಕಿನ ಜಂಜಡಗಳಿಂದ ತಾತ್ಕಾಲಿಕ ಬಿಡುಗಡೆ ಕೊಡಬಲ್ಲ, ಮುಂದೆ ಕೆಲದಿನಗಳವರೆಗೆ ಅದರ ನೆನಪುಗಳಿಂದ ಹೊರಸೂಸಿದ positive vibesಗಳ ಧನಾತ್ಮಕ ಪರಿಣಾಮದ ಪ್ರಭಾವ ಹೀಗೆ ಏನೆಲ್ಲ ಗಳಿಸಬಹುದು ಎಂಬುದನ್ನು ಸಹ ಉದಾಹರಣೆ ಸಮೇತ ಕಲಿತ ದಿನ ನಮ್ಮ ಬುತ್ತಿ ಭೋಜನದ ದಿನ.
ಇಂಥ ಬದುಕಿಗಾಗಿ ಕಳೆದುಕೊಳ್ಳುವದೇನೂ ಇಲ್ಲ. ಸ್ವಲ್ಪ ಸಮಯ ,ಜನರೊಡನೆ ಬೆರೆಯುವ ಮನಸ್ಸು, ನಮ್ಮ ಅಹಂ ಅನ್ನು ಸ್ವಲ್ಪು ತಗ್ಗಿಸುವ ಅವಶ್ಯಕತೆ, ಬೇರೆಯವರ ಮಾತುಗಳನ್ನು ಕೇಳುವ ಸಹನೆ, ಬೇರೆಯವರ ಅಷ್ಟಿಷ್ಟು ದೋಷಗಳೇನಾದರೂ ಕಂಡರೆ ಕ್ಷಮಿಸುವ ದೊಡ್ಡತನ ಇತ್ಯಾದಿ ಬೇಕಾದೀತು. ಅಲ್ಲದೇ ಇದೆಲ್ಲದರ ಒಟ್ಟು ಲಾಭದ ಫಲಾನುಭವಿಗಳೂ ನಾವೇ ಎಂದಾಗ ತಡವೇಕೆ?ಬೆರೆಯಿರಿ...ಬೆಳೆಯಿರಿ...
ಅಂದಿನ ನಮ್ಮ ಇಂಥ ಸುಂದರ, ಸುಮಧುರ ಗಳಿಗೆಗಳು ನನಗೆ ಆದಿನ ಕಲಿಸಿದ್ದೂ ಇದನ್ನೇ Thank you BUTTI BHOJANA.
.ನೆನಪಿರಲಿ...
DIL ABHEE BHARA NHEE..
Nahee...Nahee..
🙏🙏🙏🙏🙏
11. ನಂಬುವದೋ, ಬಿಡುವದೋ ನೀವೇ ಹೇಳಿ...
ನಮ್ಮ ಕಡೆಗೆ ಕೆಲವು ನಂಬಿಕೆಗಳಿವೆ. ಅವು ಮೂಢ ನಂಬಿಕೆಗಳೇ ಅಲ್ಲವೇ ಎಂಬುದನ್ನು ಬಲ್ಲವರು ಹೇಳಬೇಕು. ' ಮೂಢ'
ಶಬ್ದ ನಮ್ಮ ಶಬ್ದಕೋಶಗಳೊಳಗೆ ಸೇರುವಷ್ಟರಲ್ಲೇ ನಮ್ಮ ನಂಬುಗೆಗಳು ಗಟ್ಟಿಗೊಂಡಿದ್ದವು. ಅವುಗಳನ್ನು ನಂಬಿ ಅನಾಹುತಗಳೇನೂ ಆಗಿರಲಿಲ್ಲ. ಅಂದ ಮೇಲೆ ಬದಲಿಸಬೇಕೆಂಬ ಭಾವನೆ, ಒತ್ತಾಯ ಯಾವುದೂ ಇರಲಿಲ್ಲ. ನಂಬಿದ್ದು ಆಕಸ್ಮಿಕವಾಗಿ ನಿಜವಾದರೆ ನಂಬಿಗೆಗೆ credit, ನಿಜವಾಗಲಿಲ್ಲವೋ 'ಕತ್ತೆಬಾಲ' ಹೋಯ್ತು ಎಂಬ ತತ್ವ ನಮ್ಮನ್ನು ಸುರಕ್ಷಿತ ವಲಯದಲ್ಲೇ ಇರಗೊಟ್ಟಿತ್ತು..
ಇಂದು ಇದೆಲ್ಲ ಯಾಕೆ ನೆನಪಾಯಿತೆಂದರೆ ಬೆಳಿಗ್ಗೆ ಸೀರೆಯುಡುವಾಗ ಅದು ಗೊತ್ತಿಲ್ಲದೇ ಉಲ್ಟಾ ಆಗಿತ್ತು. ಹಾಗೆ ಸೀರೆ ತಿರುಮುರುವು ಉಟ್ಟರೆ ಹೊಸ ಸೀರೆ ಬರುತ್ತೆ ಅಂತ ಒಂದು ನಂಬಿಕೆ. ಉಣ್ಣುವ ತಟ್ಟೆ ಜಾಗ ಬಿಟ್ಟು ಸರಿದರೆ ಔತಣ ಬರುತ್ತದೆ, ಮನೆಯ ಮಾಳಿಗೆಯ ಮೇಲೆ ಕಾಗೆ ಕೂಗಿತೋ ನಂಟರು ಬರುತ್ತಾರೆ, ಮಗು ಮನೆಯ ಚಿಲಕ ಬಾರಿಸಿದರೆ ಅತಿಥಿಗಳು ಬರುತ್ತಾರೆ, ಅಂಗೈ ತುರಿಸಿದರೆ ಧನಾಗಮನ, ಅಂಗಾಲು ಕಡಿದರೆ ಎಲ್ಲಿಗೋ ಪಯಣ ಭಾಗ್ಯ , ಹೊರಗೆ ಹೊರಟ ವೇಳೆಯಲ್ಲಿ ' ಎಲ್ಲಿಗೆ'? ಎಂದು ಯಾರಾದರೂ ಕೇಳಿದರೆ ಅಪಶಕುನ, ಶುಭ ಕೆಲಸದ ವೇಳೆ ಒಂಟಿ ಸೀನು ಶುಭವಲ್ಲ, ಒಳ್ಳೆಯ ಕೆಲಸಕ್ಕೆ ಮೂರು ಜನ ಹೋಗುವದು ಸಲ್ಲದು, ಅಥವಾ ಆಕಸ್ಮಿಕವಾಗಿ ವಿಧವೆ ಎದುರಾಗುವದು, ಬೆಕ್ಕು ಅಡ್ಡ ಹೋಗುವದು ಇಂಥವುಗಳೆಲ್ಲ ಅದೇ ಪಟ್ಟಿಯ ಇನ್ನೂ ಹಲವು ನಂಬಿಕೆಗಳು --simply, a Big NO NO NO for them.
ಇವುಗಳನ್ನು ಹೀಗೆ ಮೂಢ ನಂಬಿಕೆಗಳ ಪಟ್ಟಿಯಲ್ಲಿ ಸೇರಿಸಬೇಕಾ ? ಬೇಡವಾ? ಎಂಬ ನಮ್ಮ ಹಿಂಜರಿಕೆಗೆ ಸಬಲ ಕಾರಣಗಳಿವೆ. ಇದುವರೆಗೆ ಯಾವುವೂ ಸಾರಾಸಗಟಾಗಿ ನಿಜವೂ ಆಗಿಲ್ಲ. ಸುಳ್ಳೂ ಆಗಿಲ್ಲ. ಟೊಂಗೆ ಮುರಿದದ್ದು ಕಾಗೆ ಕೂತಿದ್ದಕ್ಕಾ? ಟೊಂಗೆ ಒಣಗಿದ್ದುದಕ್ಕಾ ? ಗೊತ್ತಿಲ್ಲದೇ ಅವುಗಳನ್ನು ನಮ್ಮ ಅನುಕೂಲಕ್ಕೆ ಅರ್ಥೈಸಿ ಖುಶಿ, ಸಮಾಧಾನ ಪಟ್ಟದ್ದಿದೆ..
ಹೇಳಿ ಕೇಳಿ ನಾವು , ಹಳ್ಳಿಯ 'ಜವಾರಿ' ಮಂದಿ. ಪಟ್ಟಣಗಳ ನಯ ನಾಜೂಕು ನಮಗೆ 'ನಾಟಕಬಾಜಿ' ಅನಿಸಿದ್ದೇ ಹೆಚ್ಚು...ಎಲ್ಲಾದರೂ ಹೋಗುವದು ತಪ್ಪಿತೋ there is always 'next time' ಎಂಬ ಭಾವ. ಊಟದ ವೇಳೆಗೆ ಎಲ್ಲಿರುತ್ತೇವೋ ಅಲ್ಲಿಯೇ ಎಲೆ ಹಾಸಿ ಠಿಕಾಣಿ ಅರಿಯದ್ದಲ್ಲ. ಇನ್ನು ಅತಿಥಿಗಳು ಬರಬಾರದೇ? ಎಂಬ ಹಂಬಲ, ತುಡಿತ. ಬಂದಷ್ಟೂ ಖುಶಿ. ಉಣ್ಣುವ ಖುಶಿಗಿಂತ, ಉಣಿಸಿಯೇ ಸುಖಿಸುವ ಮಂದಿ..ವಿಧವೆಯರು ಎದುರು ಬಂದರೆ ಸಂಬಂಧಿಸಿದವರು ಮುಖ ಮುದುಡಿಸುವ ಮುನ್ನವೇ ಅವರಿಗೇ ಏನೋ ತಪ್ಪು ಮಾಡಿಬಿಟ್ಟ ಹಾಗೆಯೆ ಅನಿಸಿಕೆ . ಕಟ್ಟಾ ಸಂಪ್ರದಾಯಸ್ಥರನ್ನೂ ಅವರದೇ ಮನಸ್ಥಿತಿಯಲ್ಲಿ ಅಳೆದು ಕ್ಷಮಿಸಿಬಿಡುವ ಯಾವ ಕಾಲಕ್ಕೂ ತಪ್ಪು ತಿಳಿಯದ ಹೃದಯ ವೈಶಾಲ್ಯ. ಏನಾದರೂ ಅನಿಸಿದರೆ ಅದನ್ನು ಇತರರು ತಿಳಿಯುವ ಮುನ್ನ ಮನದಲ್ಲಿಯೇ ಹೂತು ಹಾಕುವದು ನಮಗೆ ಯಾರೂ ಕಲಿಸಬೇಕು ಎಂತಿರಲೇ ಇಲ್ಲ. ಇನ್ನು ಏನು ಹೆದರಿಸೀತು ನಮ್ಮನ್ನು!!!
ಅದಕ್ಕೇ ನಾವು ಅಂಥ ೆ ನಂಬಿಕೆಗಳಿಗೆ 'ಮೂಢ' ಅಭಿನಾಮ ' ಸೇರಿಸಲು ಅನುಮಾನಿಸುವದು.
ಅದೇ ಇವತ್ತೇ ನೋಡಿ..ಬೆಳಿಗ್ಗೆ ಸೀರೆ ಉಲ್ಟಾ ಉಟ್ಟೆ..ಎರಡೂ ಬದಿಗಳಿಗೆ ಹೆಚ್ಚು ವ್ಯತ್ಯಾಸವಿರದಿದ್ದುದೇ ಕಾರಣ. ಸರಿಪಡಿಸಿ ಉಟ್ಟುಕೊಳ್ಳಲು ಯಾಕೋ ಮನಸ್ಸಾಗಲಿಲ್ಲ. ಹೊಸ ಸೀರೆ ಬರುವ chance ಕಡಿಮೆ. ಯಾಕೆಂದರೆ ಈ ಸಲ ಕಾರ್ಯ, ಕಾರಣಗಳೂ ತಿರುವು ಮುರುವಾಗಿವೆ. ಮೊನ್ನೆ, ಒಂದೇ ದಿನ ಮೊದಲು ವಾರಣಾಸಿ ಸಿಲ್ಕ ಸೀರೆ ತಮ್ಮನ ಮಗಳಿಂದ ಬಂದಿದೆ. ಇಂದು ಸೀರೆ ಉಡುವದು ಉಲ್ಟಾ ಆಗಿದೆ. ನಾನಾವತ್ತೂ ಹಾಗೇನೇ..ಲೇಟ್ ಲತೀಫ್..ಹಹಹ
10. ಭೂತ ಗನ್ನಡಿಯಲ್ಲೊಂದು Selfieee...
ನಾನು face book ಗೆ ಬಂದದ್ದು 2014 ರಲ್ಲಿ. ಸರಿಯಾಗಿ ಐದು ವರ್ಷಗಳ ಹಿಂದೆ. ಈಗ ಹನ್ನೆರಡು ವರ್ಷ ನಡೆಯುತ್ತಿರುವ ಕೊನೆ ಮೊಮ್ಮಗನ ಪೂರ್ಣಾವಧಿ ಶಾಲೆ ಶುರುವಾಗಿ, ಬೆಳಿಗ್ಗೆ ಬೇಗ ಕೆಲಸಗಳಿಂದ ಕೈಗಳು ಖಾಲಿಯಾಗುವದು ಸಾಧ್ಯವಾದಮೇಲೆ. ಟೀವಿಯ ಮುಂದೆ ತಾಸುಗಟ್ಟಲೇ ಕಚ್ಚಿಕೊಂಡು ಕೂಡುವ ಸ್ವಭಾವವಿರದಿದ್ದುದರಿಂದ ಸಮಯ ಬೇಕೆಂದಂತೆ ಕಳೆಯುವ ಸಲುವಾಗಿ ಫೇಸ್ಬುಕ್ ಗೆ ಕಾಲಿಟ್ಟೆ.
'Just Kannada' -App down load ಮಾಡಿಕೊಂಡು ಕನ್ನಡ typing ಕಲಿತೆ. ಕಲಿತದ್ದು ಉಳಿಸಿಕೊಳ್ಳಲು, ಉಳಿಸಿದ್ದು ಬೆಳೆಸಿಕೊಳ್ಳಲು, ಬೆಳೆಸಿದ್ದನ್ನು ಹೆಚ್ಚು ಹೆಚ್ಚು ಬರೆಯುವದರಲ್ಲಿ ತೊಡಗಿಸಿಕೊಳ್ಳುವದು ಅನಿವಾರ್ಯವಾಗಿ ಆ ದಿಶೆಯಲ್ಲಿ ಪ್ರಯತ್ನ ಆರಂಭವಾಯಿತು. ಹತ್ತಾರು ಜನ friends ಗಳಾದರು.
ಬರಹಕ್ಕೊಂದು ಗತಿ ಸಿಕ್ಕು ಬರೆದದ್ದು 'ಹಾಗೇ ಸುಮ್ಮನೇ' ಹೆಸರಿನಲ್ಲಿ ದಾಖಲಿಸತೊಡಗಿದೆ. ಉಳಿದವರ ಬರಹಗಳಿಂದ ಸ್ಫೂರ್ತಿ, ಅನ್ಯ ಭಾಷೆಯ ಕೃತಿಗಳ ಅನುವಾದಗಳು, ಸ್ನೇಹ ವಲಯಗಳ ಕಾರ್ಯಕ್ರಮಗಳು, ಇತರ ಪ್ರತಿಭಾವಂತ ಲೇಖಕರು/ ಲೇಖಕಿಯರ ಸಂಪರ್ಕ, ಕಣ್ತೆರೆದು ಇತರರನ್ನು ಅಭ್ಯಸಿಸುವ ಆಸಕ್ತಿ, ಇವುಗಳೆಲ್ಲ ಸಾಧ್ಯವಾಗಿ ' ನನ್ನ ನೆಲೆ' ಎಲ್ಲಿ,? ಏನು? ಸ್ಪಷ್ಟವಾಗಿ ಅರಿವಾಗತೊಡಗಿತು..
ನನ್ನ ಸ್ನೇಹ ವಲಯದಲ್ಲಿಯೋ ಒಬ್ಬೊಬ್ಬ ಗೆಳತಿಯೂ ಒಂದೊಂದು ವಿಶ್ವ. -ಕಣ್ತೆರೆದು ನೋಡುವದು ಬಹಳಷ್ಟಿದೆ. LAGE RAHO- ಹೇಳಿತು ಒಳ ಮನಸ್ಸು. ನನಗದರ ಬಗ್ಗೆ ಕಿಂಚಿತ್ತೂ ಅಸಮಾಧಾನ, ಕೀಳರಿಮೆಯಿಲ್ಲ. ಪುಟ್ಟ ಕುಗ್ರಾಮದ ಕನಿಷ್ಠ ಅನುಕೂಲತೆಗಳೂ ಇರದ , ತುಂಬು ಕುಟುಂಬದ ಸದಸ್ಯಳಾಗಿ ಒಂದೊಂದೇ ಹೆಜ್ಜೆ ಅಂಬೆಗಾಲಿಡುತ್ತ ಬಂದ ಸಾಮಾನ್ಯ ಬದುಕು ನಮ್ಮದು. ನಮ್ಮ ಅರಿವು, ಅಸ್ಮಿತೆ, ಅರ್ಹತೆಗಳಿಗೆ ಅನುಸಾರವಾಗಿ ನಮ್ಮದೇ ದಾರಿಯಲ್ಲಿ, ನಮ್ಮದೇ ರೀತಿಯಲ್ಲಿ , ನಮ್ಮದೇ ವೇಗದಲ್ಲಿ ಇಲ್ಲಿಯವರೆಗೆ ಬಂದಾಗಿದೆ. ಮುಂದೂ ಎಷ್ಟು ಸಾಧ್ಯವೋ ಅಷ್ಟನ್ನು ಬದುಕಿಂದ ಬಾಚಿಕೊಳ್ಳುವ ಹೆಬ್ಬಯಕೆ ಅಷ್ಟೇ..
ಅವಕಾಶಗಳಿಗೆ ಬರವಿಲ್ಲ. ಸುತ್ತಲೂ ಪ್ರತಿಭಾವಂತರ ದೊಡ್ಡ ದಂಡೇಯಿದೆ . ವಯಸ್ಸಿನಿಂದ ಕಿರಿಯ ಳಾಗಿದ್ದರೂ ಅಂತಹಪುರದಂಥ ಗುಂಪನ್ನು ಹುಟ್ಟು ಹಾಕಿ ಜಯಲಕ್ಷ್ಮೀ ಆಸಕ್ತರಿಗೊಂದು ಬ್ರಹತ್ ವೇದಿಕೆಯನ್ನೇ ಸೃಷ್ಟಿಸಿದ್ದಾರೆ .ಅದರಲ್ಲಿ ಬರಹ ಚಿತ್ರಕಲೆ, ಪ್ರವಾಸಗಳಲ್ಲಿ ಮಗ್ನರಾಗಿರುವ ಉಷಾ ರೈ, /ಪ್ರಶಾಂತ, ಶಾಂತ ಮುಖಭಾವದಿಂದ ಮುನ್ನೆಲೆಯಲ್ಲಿ ನಿಂತು ಕಿರಿಯರಿಗೆಲ್ಲ ಹಿರಿಯಕ್ಕನಾಗಿ ಚೈತನ್ಯ ತುಂಬುವ ಅನುರಾಧಾ ಬಿ ರಾವ್/,ಅರ್ಧ ಜಗತ್ತನ್ನೇ ಸುತ್ತಿ, ಕಂಡದ್ದೆಲ್ಲ ಬರಹದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಇದ್ದಲ್ಲಿಯೇ ಖರ್ಚಿಲ್ಲದೇ ವಿಶ್ವ ದರ್ಶನ ಮಾಡಿಸುವ ಜಯಶ್ರೀ ದೇಶಪಾಂಡೆ/ ತಮ್ಮ ನಿರಂತರ ಪ್ರವಾಸಗಳಿಂದಾಗಿ ಸದಾಕಾಲವೂ ಕಾರ್ಯಕ್ರಮಗಳಿಗೆ ಲಭ್ಯವಾಗುವದು ಸಾಧ್ಯವಾಗದಿದ್ದರೂ ಬಂದಾಗಲೆಲ್ಲ ಚಕ್ರ ಬಡ್ಡಿ ಸಮೇತ ಬೆಂಬಲವಾಗಿ ನಿಂತು ಕಿರಿಯರೆಲ್ಲರ ಬೆನ್ನು ತಟ್ಟುವ ರೇಣುಕಾ ಮಂಜುನಾಥ, ಅಡುಗೆ, ಬರಹ, ಅಲಂಕಾರ, ಆಗಾಗ ಒಂದಿಷ್ಟು ನಟನೆ, ಕಾರ್ಯಕ್ರಮಗಳ ಸಂಘಟನೆಗಳ ಸಮರ್ಥ ರೂವಾರಿ ಗೀತಾ ಬಿ ಯು/ ಅಂತಃಪುರ, ಜನದನಿ, ಈಹೊತ್ತಿಗೆ ಗಳಂಥ ಹತ್ತು ಹಲವು ಸಂಸ್ಥೆಗಳನ್ನು ಹುಟ್ಟುಹಾಕಿ ಮುಂದಾಳತ್ವ ವಹಿಸಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಕಿರುತೆರೆ ನಟಿ, ಸಂಘಟಕಿ, ಬರಹಗಾರ್ತಿ, ಜಯಲಕ್ಷ್ಮಿ ಪಾಟೀಲ್/ ಬೇಕೆಂದಾಗ ಬೆನ್ನಿಗೊಂದು backpack, ಕೈಲೊಂದು camera ತಗುಲಿಸಿಕೊಂಡು ತಮ್ಮ ಪ್ರವಾಸದ, ಕಿರುಚಿತ್ರಗಳ ,ಜಗತ್ತಿನಲ್ಲಿ ವಿಹರಿಸಿ ಅವುಗಳ ಆನಂದವನ್ನು ಎಲ್ಲರಿಗೂ ಸಮನಾಗಿ ಹಂಚಿ ಸುಖಿಸುವ ವಿಜಯಕ್ಕ ಅಜ್ಜಿಮನೆ/ ಅಡುಗೆ ಮನೆಯಿಂದ ಅನಂತ ಆಕಾಶದ ವರೆಗೂ ಸಿಗಬಹುದಾದ ಪ್ರತಿ ವಿಷಯವನ್ನೂ ಬರಹವಾಗಿಸುವ ಶಕ್ತಿಯುಳ್ಳ ಬಿ.ವಿ.ಭಾರತಿ, ಜಯಶ್ರೀ ಕಾಸರವಳ್ಳಿ, ಪೂರ್ಣಿಮಾ, ಅಪರ್ಣಾ-, ಕಪಿಲಾ ಶ್ರೀಧರ ,ರೂಪಾ ಸತೀಶ್ ಯಾರು ಯಾರನ್ನು ಹೆಸರಿಸಲಿ? -ಪಟ್ಟಿ ಮುಗಿಯುವದೇ ಇಲ್ಲ..ಹೆಸರಿಸಿದ್ದು ಕೆಲವೇ. ಹೆಸರಿಸಬೇಕಾದ್ದು ನೂರಾರು ಬಾಕಿ ಇವೆ. ಅಸಂಖ್ಯಾತ ಹಿರಿ- ಕಿರಿಯ ಪ್ರತಿಭಾವಂತರ ಈ ಬಳಗದಲ್ಲಿ ನಾನು ಎಲ್ಲಿ? ತಿಳಿದುಕೊಳ್ಳುವದು ಬಾಕಿ ಇದೆ.
ಆದರೆ ಒಂದು ನಿಲುವು ಗಟ್ಟಿಯಾಗಿದೆ. ಬರೆಯುವದಿದ್ದರೆ ಮೊದಲು ಓದಬೇಕು, ಅರಿಯಬೇಕು ಅರಗಿಸಿಕೊಳ್ಳಬೇಕು, ಪ್ರಶಂಸೆಯ ದಾಹ ಹೆಚ್ಚಾಗಿರಬಾರದು. ಮೆಚ್ಚುಗೆಯ ಮಾತುಗಳು ಚಿಮ್ಮು ಹಲಗೆಗಳಂತೆ. ಅವು ಆಗಾಗ ಬೇಕು. ಆದರೆ ಟೀಕೆಗಳು - ಸರಿಯಾಗಿ ತೆಗೆದುಕೊಂಡಾಗ-ಸಹಾಯ ಮಾಡುವಷ್ಟು ಹೊಗಳಿಕೆಗಳು ಎಂದಿಗೂ ಮಾಡಲಾರದು .ಕಾರಣ ಇತರರ ಸಲಹೆಗಳನ್ನು ಸಮರ್ಥವಾಗಿ ಬಳಸಿಕೊಂಡು ಬೆಳೆಯುವದೂ ಒಂದು ದಾರಿಯೇ... ಮೊದಲು ಅದನ್ನು ನನ್ನದಾಗಿಸಿಕೊಳ್ಳುವ ಕೆಲಸವಾಗಬೇಕು ಕಾರಣ ಈಗ ನಾನು ಹಿಂದೆ ಬರೆದ ಕೆಲ ಬರಹಗಳನ್ನು ಮರು post ಮಾಡುವದಾದರೆ ಮತ್ತೆ ಮತ್ತೆ ಓದಿ ಬೇಕೆನಿಸಿದರೆ ತಿದ್ದುತ್ತೇನೆ. ಅದು ತಪ್ಪಿತ್ತು ಎಂದಲ್ಲ. ಇನ್ನಷ್ಟು ಚಂದವಾಗಿಸಲು.
ಬೇಂದ್ರೆಯವರೇ ಒಂದು ಸಲ ಹೇಳಿದ್ದರಂತೆ," ಜನ ಮೆಚ್ಚಿದ ಕೆಲ ನನ್ನ ಕವನಗಳು ನನಗೆ ಎಳ್ಳಷ್ಟೂ ಸಮಾಧಾನ ಕೊಟ್ಟಿಲ್ಲ. ಅವನ್ನು ಇನ್ನೂ ಚನ್ನಾಗಿ ಬರೆಯಬಹುದಿತ್ತು " ಎಂದು. ಅದರರ್ಥ ಮನುಷ್ಯ ಬೆಳೆಯುತ್ತ ಹೋದಂತೆ ಅವನ ದೃಷ್ಟಿಕೋನವೂ ಹಲವು ಆಯಾಮಗಳನ್ನು ಕಂಡು ವಿಸ್ತಾರಗೊಳ್ಳುತ್ತಲೇ ಇರುತ್ತದೆ. ಕಲಿಕೆ ನಿರಂತರ ಎಂದೆಂದಿಗೂ.
ನನ್ನೊಳಗೆ ನಾನೇ ಹೀಗೆ ವಿಚಾರಿಸಿದಾಗಲೆಲ್ಲ ಒಂದು ನಮೃತಾಭಾವ ಮನದಲ್ಲಿ ಸುಳಿಯುತ್ತದೆ...ಹೆಚ್ಚಿನದಕ್ಕಾಗಿ ಕಣ್ಣುಗಳು ತೆರೆಯುತ್ತವೆ. ಸಾಧ್ಯವಾದಷ್ಟು ಹೆಚ್ಹೆಚ್ಚು ಗ್ರಹಿಸಿ ಸ್ವಂತಿಕೆಯನ್ನು ಸಮೃದ್ಧಗೊಳಿಸಿ ಸಂಭ್ರಮಿಸುವದೂ ಒಂದು ಸಡಗರದ ಮಾತೇ ಅಲ್ಲವೇ??
Friday, 25 December 2020
9. ಜಿಂದಗೀ ಕೈಸೀ ಹೈ ಪಹೇಲಿ ಹಾಯೇ...
9. " ಜಿಂದಗೀ, ಕೈಸೀ ಹೈ ಪಹೇಲಿ ಹಾಯೆ.."
ಹೀಗೇ ಒಂದು ಸಂಜೆ. ಪರಿಚಯದವರೊಬ್ಬರ ಹತ್ತಿರ ಮಾತಾಡುತ್ತಿದ್ದೆ. ಹೋದ ವರ್ಷವಷ್ಟೇ ಅವರ ಮಗನ ಮದುವೆಯಾಗಿತ್ತು. ಹುಡುಗ/ ಹುಡುಗಿ ಕೂಡಿಯೇ ಪದವಿ ಮುಗಿಸಿದ್ದರು. ಹೀಗಾಗಿ ಸಹಜವಾಗಿಯೇ ವಯಸ್ಸಿನಲ್ಲಿ ಅಂತರವಿರಲಿಲ್ಲ . ಮದುವೆಗೆ ಮೊದಲು ಇವರು ಆ ಬಗ್ಗೆ ಪ್ರಸ್ತಾಪಿಸಿದಾಗ ಮಗ ಹೇಳಿದಮಾತು ಉಲ್ಲೇಖನೀಯ." ಅಮ್ಮಾ, ನಿಮ್ಮ ಸಮಯದಲ್ಲಿ ಕಾಲದ ವೇಗ ತುಂಬ ನಿಧಾನವಿತ್ತು ..generation gap ಗೊತ್ತಾಗಲು ಕನಿಷ್ಟ ಹತ್ತು ವರ್ಷಗಳು ಕಳೆಯುವದು ಕಾಯಬೇಕಿತ್ತು. ಈಗ ಕಾಲದ ವೇಗ ಎಷ್ಟು ತೀವ್ರ ವಾಗಿದೆ ಎಂದರೆ ವರ್ಷವೊಂದರಲ್ಲಿಯೇ ತಲೆಮಾರುಗಳ ಅಂತರ ಸ್ಪಷ್ಟವಾಗಿ ತಿಳಿದು ಬಿಡುತ್ತದೆ. ಕಾರಣ ಅದಕ್ಕಿಂತ ಹೆಚ್ಚು ವರ್ಷಗಳ ಅಂತರವಿದ್ದರೆ ಪರಸ್ಪರ ಹೊಂದಾಣಿಕೆ ಕೊನೆಯವರೆಗೂ ಕಷ್ಟವಾಗುತ್ತದೆ."
ಅಬ್ಬಾ!! ಎಂಥ ಉತ್ತರ!!!
ನಾನು ಒಮ್ಮೆಲೇ UREKA ಎಂದು ಅರ್ಕಿಮೆಡಿಸನ ಹಾಗೆ ಚೀರುವದೊಂದೇ ಬಾಕಿ. "ಈಗೀಗ ಪರಸ್ಪರ ಹೊಂದಾಣಿಕೆ ಎಲ್ಲರಿಗೂ ,ಎಲ್ಲರಲ್ಲಿಯೂ ಏಕೆ ಸಾಧ್ಯವಾಗುತ್ತಿಲ್ಲ?ಅಷ್ಟೇಕೆ ಎಲ್ಲದಕ್ಕೂ ಕಿರಿಕಿರಿ ? ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸದಾಕಾಲ ಚಿಂತಿಸಿಯೂ ಉತ್ತರ ದೊರಕದೇ ನನ್ನನ್ನು ಕಂಗಾಲು ಮಾಡಿದ ಹಲವು ಪ್ರಶ್ನೆಗಳಲ್ಲಿ ಇದೂ ಒಂದಾಗಿತ್ತು. ಯಾವುದೇ ಸಂಸಾರ ತ್ಯಜಿಸದೇ, ಬೋಧಿವೃಕ್ಷ ಹುಡುಕಿಕೊಂಡು ಹೋಗದೇ ಒಂದು ಸಂಜೆಯ ಜವಾರಿ ಹರಟೆಯ 'ಜಸ್ಟ ಮಾತ ಮಾತಲ್ಲಿ' ಯಮಧರ್ಮರಾ ಯನೊಬ್ಬ ಯಕ್ಷಪ್ರಶ್ನೆಗೆ ಉತ್ತರ ಕೊಟ್ಟು ಬಿಟ್ಟಿದ್ದ..
ಅದು ನಿಜ. ಒಂದೆರಡು ವರ್ಷಗಳಲ್ಲಿಯೇ ಪರಿಸ್ಥಿತಿಗಳಲ್ಲಿ ಬಹಳಷ್ಟು ಬದಲಾವಣೆಯಾಗಿ generation gap ನ ಅನುಭವ ಬಹುಶಃ ಎಲ್ಲರಿಗೂ ಬಂದಿರುತ್ತದೆ. ಎರಡು ಮಕ್ಕಳ ನಡುವೆ ಅಂತರ ಸ್ವಲ್ಪು ಹೆಚ್ಚಿದ್ದರೂ ' ಗೋಲಮಾಲ್' ಸಿನೆಮಾದಂತೆ ಇಬ್ಬರು ಮಕ್ಕಳಲ್ಲಿ ಒಬ್ಬ 'ರಾಮ ಪ್ರಸಾದ' ಇನ್ನೊಬ್ಬ ' ಲಕ್ಷ್ಮಣ ಪ್ರಸಾದ ' ಆಗುವ ಸಾಧ್ಯತೆಯನ್ನು ಇಂದು ಅಲ್ಲಗಳೆಯುವಂತಿಲ್ಲ. ಕೂದಲಿಗೆ ಎಣ್ಣೆ ಹಚ್ಚಿ ,ನಡುವೆ ಬೈತಲೆ ತೆಗೆದು, ಜುಬ್ಬ , ಪೈಜಾಮಾದಲ್ಲಿ ಒಂದು ಹಳೆ ಸೈಕಲ್ ಏರಿ , ಬಗಲಿಗೊಂದು ಉದ್ದದ ಬಗಲು ಚೀಲ ಏರಿಸಿ, ರಸ್ತೆಯ ಒಂದು ಬದಿಯಲ್ಲಿ ಅತ್ತಿತ್ತ ನೋಡದೇ ಒಬ್ಬ ನಡೆದರೆ ತಲೆಗೂದಲೆಲ್ಲ ಚದುರಿಸಿಕೊಂಡು, ಬಣ್ಣ ಬಣ್ಣದ ಹೂವಿನ ಅಂಗಿಯ ಕೊನೆಯ button ಮಾತ್ರ ಹಾಕಿ ಕುತ್ತಿಗೆಗೆ scarf ಸುತ್ತಿ, ಕಪ್ಪು ಕನ್ನಡಕದಲ್ಲಿ ಆಚೀಚೆ ನೋಡುತ್ತ ದೊಡ್ಡದಾಗಿ whistle ಹಾಕುತ್ತ ಬಿರುಗಾಳಿಯಂತೆ byke ಮೇಲೆ ಕ್ಷಣಾರ್ಧದಲ್ಲಿ ಪ್ರತ್ಯಕ್ಷನಾಗುವ ರಣಧೀರ ಆ ಇನ್ನೊಬ್ಬ ತಮ್ಮ. ಇಷ್ಟೊಂದು ಭಯಾನಕ ಬದಲಾವಣೆ ಇರಲಿಕ್ಕಿಲ್ಲ . ಆದರೆ ಎಂದೂ ಒಂದುಗೂಡದ ರೈಲು ಹಳಿಗಳಂತೆ ಪ್ರತ್ಯೇಕವಾಗಿಯೇ ಗಮ್ಯ ತಲುಪುವ ಸೂಚನೆಯಂತೂ ಎಳೆಯದರಲ್ಲಿಯೇ ಕೆಲವೊಮ್ಮೆ ಮಕ್ಕಳಿಂದ ಪಾಲಕರಿಗೆ ಸಿಕ್ಕೇ ಸಿಗುತ್ತದೆ. ಅಷ್ಟು ವ್ಯತ್ಯಾಸ ಗ್ಯಾರಂಟಿ... ಮಕ್ಕಳ ನಡುವಳಿಕೆಗಳಲ್ಲಿ ಮೊದಲಿನಂತೆ ಪಾಲಕರದು ಸಿಂಹಪಾಲು ಈಗೆಲ್ಲ ಇರುವದಿಲ್ಲ. ಅವರು ಹೋಗುವ ಶಾಲೆ, ಮಾಡಿಕೊಂಡ ಗೆಳೆಯರ ಬಳಗ, ಬೆಳೆಸಿಕೊಂಡ ಸ್ವಭಾವ, ಸುತ್ತುವರಿದ ಸಮಾಜದ ರೀತಿ ನೀತಿಗಳದೂ ಅವರವ್ಯಕ್ತಿತ್ವ ರೂಪಿಸುವಲ್ಲಿ ಬಹುಪಾಲು ಪಾತ್ರ ಇರುತ್ತದೆ.
ಒಬ್ಬ ಬೇಜವಾಬ್ದಾರೀ ತಂದೆಯ ಇಬ್ಬರು ಮಕ್ಕಳಲ್ಲಿ ಒಬ್ಬ ಅತ್ಯಂತ ಮೇಧಾವಿ, ಇನ್ನೊಬ್ಬ ಎಡವಟ್ಟು ಆಗಿ ಬೆಳೆದರೆ ,ಆ ಇಬ್ಬರದೂ ತಪ್ಪಿನಕಿಂತ ಅವರು ಆಯ್ದ ದಾರಿಯ ದೋಷವಿರುತ್ತದೆ. ಒಬ್ಬ ಅಪ್ಪನನ್ನು ನೋಡುತ್ತ ಬೆಳೆಯುವಾಗ ತಾನು ಹಾಗಾಗಲು ಏನು ಮಾಡಬಾರದು ಎಂದು ಗುರುತಿಸಿಕೊಂಡರೆ, ಇನ್ನೊಬ್ಬ ಅವನ ಹಾದಿಯನ್ನೇ ತನ್ನದಾಗಿ ಆಯ್ದುಕೊಂಡು ದಾರಿ ತಪ್ಪುತ್ತಾನೆ...
ನಿಜ, ಬದುಕಿಗೆ ಯಾವುದೇ ಸಿದ್ಧ ಸೂತ್ರವಿಲ್ಲ. ಅದು ನದಿಯಂತೆ ತನ್ನದೇ ಪಾತ್ರದಲ್ಲಿ ಯಾವಾಗಲೂ ಹರಿಯುವದಿಲ್ಲ. ಚಂಡ ಮಾರುತದಂತೆ ತನ್ನ ದಿಕ್ಕು, ದೆಶೆಯನ್ನು ಸ್ವಂತಕ್ಕೆ ನಿರ್ಧರಿಸುತ್ತದೆ..ಯಾರು , ಯಾವ ಪ್ರಭಾವಕ್ಕೆ ಒಳಗಾಗುತ್ತಾರೋ ಹಾಗೆ ಅವರವರ ಬದುಕು ರೂಪುಗೊಳ್ಳುತ್ತದೆ. ಇಂಥ ವೈಯಕ್ತಿಕ ವೈರುಧ್ಯಗಳ ಅಪಸವ್ಯಗಳನ್ನು ಮೀರಿಯೂ ಒಂದು ಕಾಲಕ್ಕೆ ಒಂದು ಸಾಮಾಜಿಕ ಚೌಕಟ್ಟಿನಲ್ಲಿ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಆಗ ಒಂದು ತಲೆಮಾರಿನ ಅಂತರ ಎದ್ದು ಕಂಡೇ ಕಾಣುತ್ತದೆ..
ಈಗ ಬಹುಶಃ ಬದುಕಿನ ಚಕ್ರ ದೊಡ್ಡದೊಂದು Roller coaster ನಂತೆ ತೀವ್ರ ತಿರುವುಗಳಲ್ಲಿ ಓಡುತ್ತಿದೆ ಎಂಬ ಅನುಮಾನ ನನಗೆ. ಏಕೆಂದರೆ ನಾ ಕಂಡ ಐದು ತಲೆಮಾರುಗಳ ಮಿಶ್ರಣದ ಬದುಕನ್ನು ನಾವೀಗ
ಕಾಣುತ್ತಿದ್ದೇವೆಯೇ ಎಂಬ ಅನುಮಾನ ಶುರುವಾಗಿದೆ, ಹಳೆಯ ಸಂಗತಿಗಳೆಲ್ಲ ಹೊಸವೇಷದಲ್ಲಿ ಪುನರಪಿ ಪ್ರತ್ಯಕ್ಷವಾಗುತ್ತಿವೆ. ಹಣದ ಪ್ರಭಾವ ಇನ್ನೂ ಇದ್ದರೂ ಬದುಕು ತುಸು ಬದಲಾವಣೆಗೆ ತೆರೆದುಕೊಳ್ಳುತ್ತಿದೆ .ವಿದೇಶೀ ವೈಭವಗಳ ಆಮದಿನ ಹುಚ್ಚಿನ ನಡುವೆಯೂ ಯೋಗ , ಧ್ಯಾನ, ಆಸ್ತಿಕತೆಗಳು ಹೆಚ್ಚುತ್ತಿವೆ.
ಪ್ರವಾಸ, ಚಾರಣ, back pack tour ಗಳಿಗೆ ಜನ ಒಲಿಯುತ್ತಿದ್ದಾರೆ. ಸಾಮಾಜಿಕ ಸೇವೆ, charity ಗಳಲ್ಲಿ ತಮ್ಮನ್ನು ತಾವು
ತೊಡಗಿಸಿಕೊಳ್ಳುತ್ತಿದ್ದಾರೆ.
ಒಂದು ಮಟ್ಟಿಗಿನ ಆರ್ಥಿಕ ಪರಿಸ್ಥಿತಿ ಸಾಧಿಸಿಕೊಂಡ ಮೇಲೆ ನೆಮ್ಮದಿಯ ಬದುಕಿನ ಹುಡುಕಾಟಕ್ಕಾಗಿ ಜನ ನಿರಂತರವಾಗಿ ಮಾರ್ಗ ಬದಲಿಸುತ್ತಿದ್ದಾರೆ. ಮದುವೆ ಎಂಬ ಸಾಮಾಜಿಕ ವ್ಯವಸ್ಥೆ ಕಡ್ಡಾಯ ಎಂಬ ತಿಳುವಳಿಕೆ ಕ್ರಮೇಣ ಸಡಿಲಾಗುತ್ತಿದೆ. ಹಿರಿಯ ನಾಗರಿಕರೂ ಆದಷ್ಟು ಸ್ವತಂತ್ರವಾಗಿ ಇರುವದನ್ನು ಬಯಸುತ್ತಿದ್ದಾರೆ. ಬದಲಾದ ಆರ್ಥಿಕ ಪರಿಸರ ಎಲ್ಲದಕ್ಕೂ' ರಾಮಬಾಣ'ವಾಗಿ ಇರದಿದ್ದರೂ ಬಯಸಿದರೆ ಪ್ರತ್ಯೇಕ ವ್ಯವಸ್ಥೆಯನ್ನು ಆಯ್ದುಕೊಂಡು ತಾತ್ಕಾಲಿಕ ಪರಿಹಾರಗಳನ್ನು ಕಾಣುತ್ತಿದ್ದಾರೆ. ತಲೆಮಾರುಗಳ ಅಂತರ ಯಾತನಾಮಯ ಅನಿಸಿದರೆ ಪರ್ಯಾಯ ವ್ಯವಸ್ಥೆಗಳ ಆಯ್ಕೆಗೆ ಅಭಿಮುಖವಾಗುತ್ತಿದ್ದಾರೆ.
ಒಟ್ಟಿನಲ್ಲಿ ಬೇಕಾಗಲೀ, ಬೇಡವಾಗಲಿ ಬಾಳು ನರಕಮಾಡಿಕೊಂಡು ಬದುಕಲೇ ಬೇಕಾದ ಅನಿವಾರ್ಯತೆ ಈಗೀಗ ಸ್ವಲ್ಪಾದರೂ ಪರಿಹಾರ ಕಾಣುವ ಹಂತ ತಲುಪಿದ್ದು ಒಳ್ಳೆಯದಕ್ಕೋ, ಅಲ್ಲವೋ
ಮುಂಬರುವ ಕಾಲವೇ ಉತ್ತರಿಸಬೇಕು..
8. "ಚಸ್ಮಾ ಉತಾರೋ, ಫಿರ್ ದೇಖೋ ಯಾರೋಂ"
ಐದಾರು ವರ್ಷಗಳ ಹಿಂದಿನ ಮಾತು, ಪ್ರತಿನಿತ್ಯದಂತೆ ಗೆಳತಿಯೊಂದಿಗೆ walking ಮಾಡುತ್ತಿದ್ದೆ.. ಮುಂದೆ ಎರಡು ವರ್ಷದ ಪುಟ್ಟಮಗುವೊಂದು ತೊಡರುಗಾಲು ಹಾಕುತ್ತ ಓಡುತ್ತಿತ್ತು. ಹಿಂದೆ ಅದರ ಅಪ್ಪ ಹಿಂಬಾಲಿಸುತ್ತಿದ್ದ. ನೋಡುತ್ತ ಕಣ್ತುಂಬಿಕೊಳ್ಳುತ್ತಿದ್ದೆ. ಐದು ನಿಮಿಷ ಆಗಿರಬಹುದು...ಮಗು ಒಮ್ಮೆಲೇ ಮುಗ್ಗರಿಸಿಬಿತ್ತು. ಅಲ್ಲಿಯೇ ಇದ್ದ ನಾನು ಅದರೆಡೆಗೆ ಧಾವಿಸಿದೆ. ಅದರ ಅಪ್ಪ ಕೂಗಿದ, "Aunty, NO please NO". ನಾನು ಹಿಮ್ಮೆಟ್ಟಿದೆ. ಆಗ ತಂದೆ ಅದರ ಬಳಿ ಬಂದು," Come on Brave Boy...get up...You can do it. Utho Beta..." ಎಂದು ಚಪ್ಪಾಳೆ ಹಾಕಿದ್ದೇ ತಡ, ಮಗು ಅಳು ನಿಲ್ಲಿಸಿ, ಹತ್ತಿದ ಮಣ್ಣು ಕೈಯಿಂದ ಕೊಡವಿಕೊಂಡು , ಕಣ್ಣೀರು ಒರೆಸಿಕೊಂಡು ಮತ್ತೆ ಓಟಕ್ಕೆ ಸಿದ್ಧವಾಯಿತು. ಆಗ ತಂದೆ ಅದನ್ನು ಎತ್ತಿಕೊಂಡು ಬೆನ್ನ ಮೇಲೆ ಶಹಬ್ಬಾಸ್ ಕೊಟ್ಟು 'Wah re wah Beta , ನನ್ನ ಮಗ ಬಹದ್ದೂರ್' ಎಂದು ತಬ್ಬಿ, ಮುತ್ತಿಕ್ಕಿ ಮತ್ತೆ ಕೆಳಗಿಳಿಸಿ ಹುರಿದುಂಬಿಸಿ ಕಳುಹಿಸಿದ.
ಇಂಥದೇ ಒಂದು ಜಾಹೀರಾತು ಬಹಳ ದಿನಗಳ ಹಿಂದೆ ದೂರ -ದರ್ಶನದಲ್ಲಿ ದಿನವೂ ಬರುತ್ತಿದ್ದ ನೆನಪು.ಊರಿನಿಂದ ಬಂದ ವಯಸ್ಸಾದ ತಂದೆ, ತಾಯಿಗಳನ್ನು ಮನೆಗೆ ಕರೆದೊಯ್ಯಲು ಮಗ station ಗೆ ಬರುತ್ತಾನೆ. ಗಾಡಿ ನಿಲ್ಲುತ್ತಲೇ ಮಗ ಧಾವಿಸಿ ಅಪ್ಪನಿಗೆ ಆಸರೆಯಾಗ ಬಯಸುತ್ತಾನೆ. ಆ ಸಹಾಯವನ್ನು ನಯವಾಗಿ ತಿರಸ್ಕರಿಸುತ್ತ ಅಪ್ಪ, ಗಾಡಿಯ ಪಟ್ಟಿಗಳ ಆಧಾರದಿಂದ ಕೆಳಗಿಳಿದು ನಡೆಯಲು ಶುರು ಮಾಡುತ್ತಾನೆ. ಅಮ್ಮನೂ ಗಂಡನನ್ನು ಅನುಸರಿಸುತ್ತಾಳೆ. ಮಗ ಮುಖದ ಮೇಲೆ ಮಾಸದ ಹೆಮ್ಮೆಯ ನಗುವಿನೊಂದಿಗೆ ಅವರ ಹಿಂದೆ ನಡೆಯುತ್ತಾನೆ.
ಇವೆರಡೂ ಘಟನೆ ಇಂದು ನಿನ್ನೆಯದಲ್ಲ. ಆದರೆ ಹಾಗೆ ಯಾವಾಗಲೂ ಅನಿಸುತ್ತದೆ. ಬರುವ ಫೆಬ್ರುವರಿಗೆ 75 ಕ್ಕೆ ಕಾಲಿಡುತ್ತಿರುವ ನನಗೆ ಅವು ನೆನಪಾದಾಗಲೊಮ್ಮೆ ಕಣ್ಣಲ್ಲಿ ಮಿಂಚು ಮೂಡುತ್ತದೆ. ಮುಂದೆ ಕ್ರಮಿಸಬೇಕಾದ ದಾರಿ ಕಣ್ಣುಗಳ ಮುಂದೆ ನಿಚ್ಚಳವಾಗುತ್ತದೆ. ಆದಷ್ಟೂ ನಮ್ಮನ್ನು ನಾವು ಸಂಭಾಳಿಸಿಕೊಳ್ಳುವ ಸಾಮರ್ಥ್ಯ ,ಆತ್ಮ ವಿಶ್ವಾಸ, ಇದ್ದರೆ ಬೇರೇನು ಬೇಡೀತು ಮನಸು!!!
ಇತರರು ಮಾಡುವ ಸಹಾಯ ಕಟ್ಟಿಕೊಡುವ ಬುತ್ತಿಯಂತೆ. ಒಂದು , ಬಹಳವೆಂದರೆ ಎರಡು ದಿನಗಳಿಗೆ. ಬುತ್ತಿ ಮಾಡುವುದನ್ನು ಕಲಿತುಕೊಂಡರೆ ಇಡೀ ಜನ್ಮಕ್ಕೆ. ಮುಂದೆ ಯಾರಿಗೂ ಹೊರೆಯಾಗದಂತೆ ಬದುಕು ಸಾಗಿಸಲು ಸಹಾಯವಾಗುತ್ತದೆ. ಇದರರ್ಥ ಪರರ ಹಂಗಿಲ್ಲದೇ ಬದುಕುವೆನೆಂಬ ಜಂಬವಲ್ಲ. ಬದುಕಬಲ್ಲೆ ಎಂಬ ಆತ್ಮವಿಶ್ವಾಸವನ್ನು ಗಳಿಸುವದೊಂದು ಉದ್ದೇಶವಷ್ಟೇ.
ಅವಶ್ಯಕತೆ ಇದ್ದಾಗ ಸಹಾಯಕ್ಕೆ ಯಾರೂ ಬರುವಂತೆ ಜನರನ್ನು ಕಾಯ್ದುಕೊಳ್ಳಬೇಕು..ಆದರೆ ಆ ಸಮಯ ಆದಷ್ಟೂ ಬರದೇ ಇರುವಂತೆ ನಾವು ಬದುಕಬೇಕು. ಖಂಡಿತ ಇದು 'ಸೊಕ್ಕಿನ' ಮಾತಲ್ಲ. 'ಸುಕೂನ್' - ಅಂದರೆ ಮನಸ್ಸಿಗೆ ನೆಮ್ಮದಿ, ಆರಾಮ ತರುವ ಮಾತು.
ಪರಿವಾರ, ಸ್ನೇಹ, ಬಳಗ, ಆಪ್ತೇಷ್ಟರು , ಸಾಂಘಿಕ ಜೀವನ ಬೇಕೆನಿಸುವದೇ ಇಂಥ ಕಷ್ಟದ ದಿನಗಳಲ್ಲಿ. ಒಬ್ಬರಿಗೊಬ್ಬರು ಇರುವದೇ ಆ ಕಾರಣಕ್ಕೆ. ಹಾಗೆಂದು ಸದಾ ಬೇರೊಬ್ಬರ ಮೇಲಿನ ಅವಲಂಬನ ಉಭಯ ಪಕ್ಷಗಳಿಗೂ ಹಿತಕಾರಿಯ ಯೇನಲ್ಲ. ಅವರವರದೇ ಬದುಕು ಇರುವದರಿಂದ ಅದು ಸಾಧ್ಯವೂ ಇಲ್ಲ.
ಇಂಥ ಸ್ವಾವಲಂಬನೆಯ ಬದುಕು ರಾತ್ರೋರಾತ್ರಿ ಏಕಾಏಕಿ ಬರುವದಲ್ಲ. ಮೇಲೆ ಉಲ್ಲೇಖಿಸಿದ ಮಗುವಿನ ವಯಸ್ಸಿನಲ್ಲೇ ಪಾಲಕರು ಆ ಕಡೆಗೆ ಲಕ್ಷ್ಯ ಕೊಡಲೇಬೇಕಾದ ಅಂಶವಿದು. ಅತಿಯಾದ ಅಕ್ಕರೆ, ಕಾಳಜಿ, spoon feeding ಇವು ಬೆಳವಣಿಗೆಯ ಹಾದಿಯಲ್ಲಿಯ speed breakers ಇದ್ದಂತೆ. ಅತಿಯಾದ ಪ್ರೀತಿ, ಅನುಕಂಪಗಳು ಮನಸ್ಸನ್ನು Comfort Zone ನಲ್ಲಿ ಇರಗೊಟ್ಟು ಕ್ರಮೇಣ ಅದನ್ನು ಶಾಶ್ವತವಾಗಿ ಜಡಗೊಳಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಮೇಲೆ ಉದಾಹರಿಸಿದ ಎರಡೂ ಪ್ರಸಂಗಗಳಲ್ಲಿ ತಂದೆ ಹಾಗೂ ಮಗನ ನಡುವಳಿಕೆ ಮೇಲ್ನೋಟಕ್ಕೆ ನೋಡುಗರಿಗೆ ಕಠೋರವೆನಿಸುತ್ತವೆ. ಆ ತಂದೆ ಮಗುವನ್ನೆತ್ತಲು ಹೊರಟ ನನ್ನನ್ನು ತಡೆದಾಗ ನನಗೆ ಥೇಟ್ ಹಾಗೇ ಅನಿಸಿತು. ಆದರೆ ಕ್ಷಣಗಳೆಡರಲ್ಲಿ ಬದಲಾದ scenario ನನಗೆ ಜೀವನದುದ್ದಕ್ಕೂ ಬೇಕಾದ ಪಾಠವನ್ನು ಕಲಿಸಿದ್ದನ್ನು ಜೀವನದುದ್ದಕ್ಕೂ ಮರೆಯುವ ಹಾಗೇ ಇಲ್ಲ.
ಸಾಮಾನ್ಯವಾಗಿ ತರಾತುರಿಯ ಸಮಯದಲ್ಲಿ, ಸಮಯದ ಅಭಾವವಿದ್ದಾಗ, ಮಕ್ಕಳಿಗೆ ಆರೋಗ್ಯ ಕೈಕೊಟ್ಟಾಗ ಎಂದು ಅನುಕಂಪಗಳ ಸರಣಿ ಸಕಾರಣಗಳಿಗಾಗಿಯೇ ಪ್ರಾರಂಭವಾಗುತ್ತದೆ. ಹಾಗಿದ್ದಾಗ ಅವಲಂಬನೆ ಅನಿವಾರ್ಯ ಎನಿಸಲು ಬಹಳ ವೇಳೆ ಬೇಕಾಗಿಯೇ ಇಲ್ಲ. ಮಾಡುವವರಿಗೆ 'ಚಟ'ವಾಗಿ, ಮಾಡಿಸಿಕೊಳ್ಳುವವರಿಗೆ ' ಚೈನಿ' ಯಾಗಿ ಹೇಗೆ ಬದಲಾಗುತ್ತವೆ ಗೊತ್ತೇ ಆಗುವದಿಲ್ಲ..ಯಾವುದೋ ಒಂದು ಕಾರಣದಿಂದ ಅದು ಸಾಧ್ಯವಾಗುವದಿಲ್ಲ ಅನ್ನುವವರೆಗೂ ವ್ಯತ್ಯಾಸ ಕೂಡ ತಿಳಿಯುವದಿಲ್ಲ. ಮುುಂದೆ ಅಂಥ ಪ್ರಸಂಗವೇನಾದರೂ ಬಂತೋ, ಮೈಮೇಲೆ ಮುಗಿಲು ಕಳಚಿ ಬಿದ್ದಂತೆ ಕಂಗಾಲಾಗುವದು ಸಹಜ ಸಾಮಾನ್ಯ. ಏನಾದರೂ ತತ್ಕಾಲಕ್ಕೆ ಮಾಡಬೇಕೆಂದರೂ 'ಯುದ್ಧಕಾಲೀನ ಶಸ್ತ್ರಾಭ್ಯಾಸ' ದಂತೆ ಗೊಂದಲಮಯ...
ಕಾರಣ ಪ್ರಾರಂಭದಿಂದಲೇ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸುವದರ ಅಭ್ಯಾಸವೂ ಅನಿವಾರ್ಯವಾಗಿರುತ್ತದೆ. ಪ್ರವಾಹದೊಂದಿಗೆ ಈಸುವವರೆಗೂ ಕಷ್ಟವಿಲ್ಲ. ವಿರುದ್ಧ ಸೆಣಸಬೇಕಾದಾಗ ಸ್ವಲ್ಪಾದರೂ ತಯಾರಿ ಇಲ್ಲದಿದ್ದರೆ ಬದುಕೇ ದುರ್ಭರವಾಗಬಹುದು .ಕಾರಣ ಒಂದು ಹಂತದಲ್ಲಿ ಮಕ್ಕಳಿಗೆ ಸ್ವಾವಲಂಬನೆಯ ಪಾಠ ಬೇಕೇಬೇಕು. ಈಗಿನ ಕಾಲದಲ್ಲಂತೂ ಎಲ್ಲರ ಮನೆಯ ಮಕ್ಕಳು ಒಂದಿಲ್ಲ ಒಂದು ಹಂತದಲ್ಲಿ ವಿದೇಶಕ್ಕೆ ಹೋಗುವದು ಕಡ್ಡಾಯವೇನೋ ಎಂಬಂತಾಗಿದೆ. ಜಗತ್ತಿನ ಯಾವುದೇ ಮೂಲೆಗೆ ಹೋದರೂ ತಮ್ಮನ್ನು ತಾವು ಸಂಭಾಳಿಸಿಕೊಳ್ಳುವ ಮನಸ್ಥಿತಿಯನ್ನು ಬೆಳೆಸುವದೂ ಪಾಲಕರಿಗೆ, ಹಾಗೂ ಮಕ್ಕಳಿಗೆ ಒಂದು challenge ಆಗಿದೆ. ಸ್ವಲ್ಪು practical ಆಗಿ ವಿಚಾರ ಮಾಡಿದರೂ ಇದರ ನಿಜಾಂಶ ನಿಮಗೆ ಸುತ್ತಮುತ್ತಲೂ ಕಾಣಸಿಗುತ್ತದೆ. ಉಳಿದಂತೆ ನಮ್ಮ ಪ್ರಯತ್ನ ಒಂದೇ ಬಾಕಿ ಇರುವದು...
ಅದೇ ಕಾರಣಕ್ಕೆ' ಅತಿ ಕಾಳಜಿ ಹಾಗೂ ಪ್ರೀತಿಯ ಚಸ್ಮಾ' ತೆರೆದಿಟ್ಟು ಜಗತ್ತನ್ನು ನೋಡುವದನ್ನು ಕಲಿಯಬೇಕು. ಆಗೊಂದು ಹೊಸ ಜಗತ್ತೇ ತೆರೆದುಕೊಳ್ಳುವದನ್ನು ಕಾಣುತ್ತೇವೆ.
Thursday, 24 December 2020
7. ನಾವಿರುವುದು ಸುಖದಲ್ಲೋ...ಸುಖದ ಭ್ರಮೆಯಲ್ಲೋ...
"ನಾವಿರುವದು ಸುಖದಲ್ಲೋ...
ಸುಖದ ಭ್ರಮೆಯಲ್ಲೋ..."
ನಾನು Electronic city ಗೆ ಬಂದ ಹೊಸತು. ತಿಂಗಳೊಪ್ಪತ್ತಿನಲ್ಲಿ ಅನೇಕ ಸ್ನೇಹಿತೆಯರಾದರು. ಅದರಲ್ಲಿ ಕರ್ನಾಟಕದವರು ಕಡಿಮೆಯೇ. ಹಾಗೆ ಪರಿಚಯವಾದವರಲ್ಲಿ ತಮಿಳುನಾಡಿನವರೂ ಒಬ್ಬರಿದ್ದರು. ಅವರು ಪದೇ ಪದೇ ಒಂದು ಮಾತು ಹೇಳಿ ಚಡಪಡಿಸುತ್ತಿದ್ದರು,
" ನನ್ನನ್ನು ಮದುವೆ ಮಾಡಿಕೊಟ್ಟ ಹೊಸದರಲ್ಲಿ ನಮ್ಮಮ್ಮ ತುಂಬಾನೇ ಅಳೋರು".
" ಸ್ವಾಭಾವಿಕ ತಾನೆ? ಎದೆಯುದ್ದ ಬೆಳೆದ ಮಗಳು ಒಂದುದಿನ ಇದ್ದಕ್ಕಿದ್ದಂತೆ ಹೊರಟುನಿಂತರೆ ಸಂಕಟವಾಗುವದಿಲ್ಲವೇ?- ಇದು ನಾನು.
" ಹಾಗಲ್ಲ ಕೃಷ್ಣಾ, ನಮ್ಮ ಅತ್ತೆಮನೆಗೆ ನಾನು ಬಂದಾಗ ಅಡಿಗೆಯವರು, ಕೆಲಸದವರು ಇರಲೇಯಿಲ್ಲ . ನಮ್ಮ ತಾಯಿಯ ಮನೆಯಲ್ಲಿ ಕೈಗೊಬ್ಬರು, ಕಾಲಿಗೊಬ್ಬರು ಇದ್ದು ನನಗೆ ಕೆಲಸದ ರೂಢಿ ಇರಲೇಯಿಲ್ಲ. ನನಗೆ ಅಡಿಗೆ, ಉಳಿದ ಕೆಲಸ ಕಷ್ಟವಾಗುತ್ತೆ ಅಂತ ಅವರಿಗೆ ಕಾಳಜಿ, ಅಳು, ಚಿಂತೆ..ನಾನು ಮೊದಲಬಾರಿ ಅವಾಕ್ಕಾದೆ...ಎರಡನೇ ಬಾರಿಗೆ ನಗು ಬಂತು...ಮೂರನೇ ಬಾರಿ ಕೆಡುಕೆನಿಸಿತು...ಇಪ್ಪತೈದು ವರ್ಷಕ್ಕೆ ಹತ್ತಿರವಿದ್ದ ಮಗಳಿಗೆ ಮದುವೆ ಮಾಡುವ ವಿಚಾರವಿದ್ದಮೇಲೆ ಕೆಲವಾದರೂ ಅವಶ್ಯಕ ಕೆಲಸ - ಕಾರ್ಯದ ಅನುಭವ ಕಲಿಸಿ ಕೊಡಿಸಲೇಬೇಕಾದುದು ಪಾಲಕರ ಕರ್ತವ್ಯ..ಇಲ್ಲವೇ ಪ್ರಸಂಗಬಿದ್ದರೆ ತನ್ನ ಮನೆಯಲ್ಲಿ ನಿಧಾನವಾಗಿ ಒಂದೊಂದೇ ಕಲಿಯಲಿ ಬಿಡಿ. ನಮಗೂ ಗೊತ್ತಿರಲಿಲ್ಲ, ಈಗ ಕಲಿತಿಲ್ಲವೇ?- ಇದೂ ಒಂದು ನಿಲುವು. ಅದು ಬಿಟ್ಟು ಮನೆಯವರೆಲ್ಲ ಮುತ್ತಿನಂತಹ ಜನರಿರುವಾಗ ಅಡಿಗೆಯವರಿಲ್ಲ ,ಸಾಕಷ್ಟು ಕೆಲಸದವರಿಲ್ಲ ಎಂದು ಗೋಳಾಡುವದು ಅವಿವೇಕದ ಪರಮಾವಧಿ ಅಲ್ಲವೇ ಅನಿಸಿತು ಆ ಗಳಿಗೆಗೆ.
ಇದಕ್ಕೆ ಕಾರಣ " ಅಡಿಗೆಯವರನ್ನು ಇಟ್ಟುಕೊಳ್ಳುವದು "ಶ್ರೀಮಂತಿಕೆಯ, ಪ್ರತಿಷ್ಠೆಯ, ದೊಡ್ಡಸ್ತನದ ಪ್ರತೀಕ " ಎಂಬ ತಪ್ಪು ಕಲ್ಪನೆ. ಸಮಯವೇ ಸಿಗದಂಥ ನೌಕರಿ, ಮನೆತುಂಬ ಜನ, ಅನಾರೋಗ್ಯದ ಅನಿವಾರ್ಯ ತೊಂದರೆಗಳು, ಬರಿ ಹಿರಿಯರೇ ಇರುವಂಥ ಸಂಸಾರ ಇದ್ದರೆ ಅಡಿಗೆಯವರು, ಕೆಲಸದವರು ಅನಿವಾರ್ಯ...ಆದರೆ ಅದಾವದೂ ಕಾರಣವಿಲ್ಲದೇ "ದುಡ್ಡಿದೆ, ಯಾಕೆ ದುಡಿಯಬೇಕು?" ಎಂಬ ಅನಿಸಿಕೆ ಇದ್ದರೆ ಅಂಥವರು ಮತ್ತೆ ಮತ್ತೆ ಯೋಚಿಸುವದು ಒಳ್ಳೆಯದು..ಅಡಿಗೆ ಯವರನ್ನು ನಿಯೋಜಿಸಿ ಉಳಿಯಬಹುದಾದ ಸಮಯವನ್ನು ರಚನಾತ್ಮಕವಾಗಿ ಸದುಪಯೋಗ ಪಡಿಸಿಕೊಂಡರೆ ಅದೂ ಒಳ್ಳೆಯದೇ...ಆದರೆ ಶ್ರೀಮಂತಿಕೆ, ಅಂತಸ್ತಿನಿಂದ ನಾಲ್ಕುಜನರಲ್ಲಿ ಹೌದೆನಿಸಿಕೊಳ್ಳುವ ಹುಚ್ಚಿದ್ದರೆ ಅಂಥವರನ್ನು ದೇವರೇ ಕಾಪಾಡಬೇಕು..ನಾನು ಕಂಡಂತೆ ನನ್ನ ಗೆಳತಿ ಅತ್ಯಂತ ಸ್ಥೂಲ ಕಾಯದವರು. ಕುಳಿತರೆ ಕಾಲುಗಳು ಮೈಯಭಾರಕ್ಕೆ ಜುಮುಗುಟ್ಟುತ್ತಿದ್ದವು...ಏದುಸಿರು ಸುರುವಾಗುತ್ತಿತ್ತು, ಅವರ ಜೊತೆ ಹೆಜ್ಜೆ ಹಾಕುತ್ತ ಜೊತೆಯಾಗುವದು fast walking ಮಾಡುವವರಿಗೆ ತೀರ ಕಷ್ಟವಾಗುತ್ತಿತ್ತು...ಹತ್ತು ನಿಮಿಷಕ್ಕೊಮ್ಮೆ ಕುಳಿತು, ನಿಂತು ಸಾಗುತ್ತಿದ್ದರು. ಇದನ್ನು ಹೊರತುಪಡಿಸಿದರೆ ಬೇರೆ ಆರೋಗ್ಯ ಸಮಸ್ಯೆಗಳಿರಲೇಯಿಲ್ಲ..ಇದೂ ಅತಿಯಾದ ಸುಖಜೀವನದ- ಅಥವಾ- ಅಂಥದೊಂದು ಭ್ರಮೆಯ- ಬದುಕಾಗಿತ್ತು...ಶಾರೀರಿಕವಾಗಿ ಚಟುವಟಿಕೆಯಿಂದ ಇದ್ದುದೇ ಆದರೆ ಅದು ಸಮಸ್ಯೆ ಅಲ್ಲವೇ ಅಲ್ಲ ಎಂಬ ಸರಳ ಸತ್ಯ ಒಪ್ಪಲು ಅನೇಕರಂತೆ ಅವರೂ ಸಿದ್ಧರಿರಲಿಲ್ಲ...
ಇದು ಒಬ್ಬರ ಸಮಸ್ಯೆಯಲ್ಲ, ಈಗ ಬಹುತೇಕ ಜನರ ನಿಲುವು ಅಥವಾ ನಂಬಿಕೆ . ಅಗತ್ಯವಿದ್ದರೆ ಯಾವುದೇ ಸಹಾಯ ಪಡೆಯುವದು ತಪ್ಪಲ್ಲ, ಆದರೆ ದುಡಿಯುವದೆಂದರೆ 'ಇಲ್ಲದವರ', ಬಡವರ, ಜಿಪುಣರ' ಲಕ್ಷಣ ಎಂಬ ವ್ಯಾಖ್ಯಾನ ಖಂಡಿತಕ್ಕೂ ಅಪಾಯಕಾರಿ...ಮನೆಯ ಜನರೆಲ್ಲ ಕೆಲಸಗಳನ್ನು , ಜವಾಬ್ದಾರಿಗಳನ್ನು ಸಮನಾಗಿ ಹಂಚಿಕೆ ಮಾಡಿಕೊಂಡು ತಿಂಗಳೆರಡು ತಿಂಗಳು ಪ್ರಯೋಗ ಮಾಡಿನೋಡಲಿ...ಕುಟುಂಬ ಸದಸ್ಯರೆಲ್ಲ ಒಂದಾಗುವದೇ ಅಂಥ ಸಂದರ್ಭಗಳಲ್ಲಿ. ನಗುವದು, ಕಾಲೆಳೆಯುವದು, ಕಿಚಾಯಿಸುವದು, ಹುಸಿಕೋಪ, ಸುಳ್ಳು ಜಗಳಗಳು...ಒಂದೇ...ಎರಡೇ...ಬದುಕಿನ thrill ಅಂದರೇನೇ ಅದು. ಪರಸ್ಪರ ಕೊಡ ಕೊಳ್ಳುವಿಕೆ ಅಂದರೂ ಅದೇ. ಬದಲಾವಣೆಯೇ ವಿರಾಮವೆನ್ನುತ್ತಾರೆ ತಿಳಿದವರು ..ನಾಲ್ಕು ಮಕ್ಕಳು ಮೂರು ಮೊಮ್ಮಕ್ಕಳಿರುವ ನಮ್ಮ ಕೆಲಸದಾಕೆಯದು ಚುರುಕಿನ ದಿನಚರಿ...ಆರಕ್ಕೆ ಎದ್ದರೆ ರಾತ್ರಿ ಹನ್ನೊಂದರವರೆಗೆ ಬಿಡುವಿಲ್ಲದ ಕೆಲಸ...ಅಷ್ಟಾದರೂ ಒಂದು ದಿನವೂ ಗೊಣಗಿಲ್ಲ...ನೋಡಲು ಇಪ್ಪತೈದು ವರ್ಷದವಳ ಚಟುವಟಿಕೆ ಏಕ ಕಾಲಕ್ಕೆ .ಎರಡು ಮೂರು ಕೆಲಸಗಳನ್ನು ಏಕಕಾಲಕ್ಕೆ ಸಂಭಾಳಿಸುವ ಜಾಣತನ. ಅತಿ ಮಿತಿಯ ಊಟ. ಕೆಲಸಕ್ಕೆ ಬಂದಷ್ಟೇ ಮುಗಿಸಿ ಹೋಗುವಾಗಲೂ ನಗುಮುಖ..ಅವಳನ್ನು ನೋಡಿ ನಾನು ಬಹಳಷ್ಟು ಕಲಿತಿದ್ದೇನೆ..ಕಲಿಯುತ್ತಿದ್ದೇನೆ.
ಗುಟ್ಟು ಕೇಳಿದರೆ ಅವಳದು ಒಂದೇ ಉತ್ತರ," ಅಮ್ಮ ಮೈತುಂಬ ಕೆಲಸವಾಗುತ್ತೆ, ಹೊಟ್ಟೆತುಂಬ ಹೊಟ್ಟೆಗೆ ಹಾಕುತ್ತೀರ, ರಾತ್ರಿ ಹಾಸಿಗೆ ಕಂಡರೆ ಬೆಳಗಿನ ಅಲಾರಾಂಗೇನೇ ಕಣ್ತೆರೆಯುತ್ತೇನೆ...ಬೇರಾವುದೂ ತಲೆಯಲ್ಲಿ ನುಸುಳುವದೇಯಿಲ್ಲ ಎಂದು ನಿರ್ಮಲ ನಗೆ ಬೀರುತ್ತಾಳೆ...ಒಂದುದಿನ ಯಾವುದಕ್ಕೂ ಆಸೆ ಪಟ್ಟವಳಲ್ಲ, ಕೊಟ್ಟರೆ ಪ್ರಸಾದ ಎಂಬಂತೆ ಸ್ವೀಕರಿಸುತ್ತಾಳೆ. ಸಂಪತ್ತಿಗೂ, ಸೌಲತ್ತಿಗೂ, ಸುಖಕ್ಕೂ ಸಂಬಂಧವೇ ಇಲ್ಲ ಎಂದು ಓದಿದ್ದೆ...ಕೇಳಿದ್ದೆ...ಈಗ ದಿನಾಲೂ ಕಣ್ಣಾರೆ ಕಾಣುತ್ತಿದ್ದೇನೆ.
ಎಲ್ಲರೂ ಆಲಸಿಗಳಾಗೇನೂ ಇರುವದಿಲ್ಲ. ಪರಿಚಯದ ಹಲವರಿದ್ದಾರೆ. ಉತ್ತಮ ಹುದ್ದೆ, ಕೈತುಂಬ ಸಂಬಳ. ಬಿಡುವಿಲ್ಲದ ದಿನಚರಿಯ ಮಧ್ಯದಲ್ಲೂ ಸ್ವಲ್ಪು ಸಮಯ ಸಿಕ್ಕರೂ ಏನಾದರೊಂದು ಮಾಡುತ್ತಲೇ ಇರುವದು ಜಾಯಮಾನ. ಏನಾದರೂ ಮಾಡಲು ಇರದಿದ್ದರೇನೇ ಅವರ ಮಟ್ಟಿಗೆ ಸಮಸ್ಯೆ. ಇದು ಮಾಡಬೇಕಾದ, ಮಾಡಬಾರದ ಕೆಲಸವೆಂಬ ಭೇದವನ್ನೇ ಕಾಣೆ..ಬರಿ ಹೆಂಗಸರಲ್ಲ, ಹಾಗಿದ್ದ ಹಲವಾರು ಗಂಡಸರನ್ನೂ ನೋಡಿದ್ದೇನೆ, ಹತ್ತಿರದಿಂದ ಕಂಡಿದ್ದೇನೆ...ಅಂಥವರ ಮುಖದಲ್ಲಿ ಆಯಾಸವಾಗಲೀ,ಮುಖ ಬಾಡಿದ್ದಾಗಲೀ , ಉಳಿದವರ ಬಗ್ಗೆ ಸಲ್ಲದ ಮಾತಾಡುತ್ತ ಕಾಲಹರಣ ಮಾಡಿದ್ದನ್ನಾಗಲೀ ನೀವು ಕಾಣಲಾರಿರಿ...ಸದಾ ಕೆಲಸದಲ್ಲಿದ್ದವರಿಗೇ ಏನಾದರೂ ಮಾಡಲು ವೇಳೆಯಿರುವದು ಎಂಬ ಮಾತಿದೆ...ನಿಜ, ಅಂತೆಯೇ ಅವರಿಂದ ಹೆಚ್ಚು ಹೆಚ್ಚು ಕೆಲಸ ಸಾಧ್ಯವಾಗುವದು ಎದುರಿಗೇ ಕಾಣುತ್ತದೆ.
ಎಲ್ಲದರಲ್ಲೂ ವಿದೇಶಿಗರನ್ನು ಅನುಸರಿಸುವ ನಾವು, ಅವರ ಕೆಲಸದ ಪದ್ಧತಿ, ಸ್ವಚ್ಛತೆ, ಯಾವುದೇ ಕೆಲಸವಿರಲಿ ಅದಕ್ಕೆ ಕೊಡುವ ಗೌರವ, ಅವರ ಸೌಜನ್ಯತೆ ಗಳನ್ನು ಗಮನಿಸುವದೇಯಿಲ್ಲ...ಅಲ್ಲಿ ಕೆಲಸದವರಿರುವದೇ ಇಲ್ಲ, ಎಲ್ಲವೂ self help...ಅಲ್ಲಿರುವವರೆಗೆ ಅನಿವಾರ್ಯವಾಗಿ ಗೊಣಗುತ್ತಲೇ ಒಗ್ಗಿಕೊಳ್ಳುವ ನಾವು ಭಾರತಕ್ಕೆ ಕಾಲಿಡುವ ಮೊದಲೇ ಸಹಾಯಕರ ವ್ಯವಸ್ಥೆ ಮಾಡಿಕೊಳ್ಳುತ್ತೇವೆ..ಒಂದೆರಡು ದಿನ ಕೆಲಸದವರಿಲ್ಲವೆಂದರೂ ಆಕಾಶವೇ ಕಳಚಿ ತಲೆಮೇಲೆ ಬೀಳುತ್ತದೆ...ಇದು ಅಭ್ಯಾಸ ಬಲವೇ ಹೊರತು ಬೇರೇನಿಲ್ಲ...ಅದಕ್ಕೆ ಅಡುಗೆ, ಕೆಲಸ ಎಂಬುವು ಒಂದು ನೆವ ಮಾತ್ರ...ಬೇರೆಲ್ಲದಕ್ಕೂ ಯಾರಾದರೂ ,ಮಾಡುವವರಿದ್ದರೆ ನಾವೆಲ್ಲರೂ, ದೊರೆಸಾನಿಯರೇ...
(...ನನ್ನನ್ನೂ ಹಿಡಿದು...)
6. ಈ ಮೌನವಾ ತಾಳೆನು...ಮಾತಾಡೆ ದಾರಿಯ ಕಾಣೆನು...
4. ಎನ್ನ ಕಣ್ಣ ನೋಟದಲ್ಲಿ ನೂರು ( ??? ) ಕಂಡೆನು...
5. Un heard melodies are sweeter...
3. ಹೀಗೊಂದು ಕಥೆ ಅಲ್ಲದ ಕಥೆ...
2 . 'ಅಮ್ಮ'ನಂತೊಬ್ಬ ತಮ್ಮನಿದ್ದ...
1. ಹೇಳಿ ಹೋಗು ಕಾರಣ...
*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...
-
ಬಿಂಬ-೧ ಗೆಲುವು... ನನ್ನ ಮನಶ್ಯಾಸ್ತ್ರದ ಸಂಶೋಧನೆಯ ಭಾಗವಾಗಿ ನನ್ನ ಅಜ್ಜಿಯ ಸಂದರ್ಶನ ತೆಗೆದುಕೊಳ್ಳುತ್ತಿದ್ದೆ."ಯಶಸ್ಸು ಅಂದ್ರೆ ನಿನ್ನ ದೃಷ್ಟಿಯಲ್ಲಿ ಯಾವುದು...
-
ಮಗುವಿನ ಸ್ವಗತ ಏನು ಹೇಳಲಿ ನಿಮಗೆ ನನ್ನ ಮನಸಿನ ಪೇಚು..? ದೊಡ್ಡವರು ಎಂಬುವರು ಒಗಟು ನನಗೆ... ಮಾಡಬಾರದುದೆಲ್ಲ ಮರೆಯದೆ ಹೇಳುವರು.. ಮಾಡಬಾರದ್ದನ್ನೇ ಮಾಡುವರು ...
-
ಒಮ್ಮೆ ಒಬ್ಬ ಹಿರಿಯ ಸಾಧಕರನ್ನು ,ಅವರ ' ಶತಾಯುಷ್ಯದ' ಗುಟ್ಬಿನ ಬಗ್ಗೆ ಸಂದರ್ಶಕನೊಬ್ಬ ಪ್ರಶ್ನಿಸಿದಾಗ ಅವರು ಹೇಳಿದ್ದು," ಗುಟ್ಟೂ ಇಲ್ಲ, ಮಣ್ಣೂ ಇಲ್ಲ,...