ಯಾವುದೇ ವಿಚಾರವೊಂದು ತಲೆಯಲ್ಲಿ ಬೀಜಾಂಕುರವಾಗಿ ಆಕಾರಗೊಂಡು ಎರಡೂ ಬೊಗಸೆಗಳ ತುಂಬಾ ದಕ್ಕುವದೆಂದರೆ ಅದೂ ಒಂದು 'ಪ್ರಸವ' ಸಮಾನ ಕೆಲಸವೇ...
"ಗಂಡಸಿಗೆ ಪ್ರಸವ ವೇದನೆ
ಇಲ್ಲ ಎಂದವರಾರು?
ಕವಿಗಳನ್ನೊಮ್ಮೆ ಕೇಳಿನೋಡಿ"-
ಇದು ನಾನು ಹಿಂದೊಮ್ಮೆ ಓದಿ
ಮೆಚ್ಚಿಕೊಂಡ ಒಂದು ಹನಿಗವನ.( ಯಾರದು ನೆನಪಿಲ್ಲ)ಈ ಪ್ರಕ್ರಿಯೆಯಲ್ಲಿ
ಅನೇಕರ ಆಶಯ, ಆಶೀರ್ವಾದ, ಅನುಗ್ರಹಗಳು ನೇಪಥ್ಯದಲ್ಲಿ ಕೆಲಸ ಮಾಡಿರುತ್ತವೆ.ಒಂದು ಹೆಸರು/ ಒಂದು ಯಾದಿ ಕೊಟ್ಟು ಋಣ ತೀರಿಸುವ ಮಾತಲ್ಲ ಇದು.ಅಂತೆಯೇ ಇವು ನೇರ ಅನುವಾದಿತ ಕವನಗಳಲ್ಲದಿದ್ದರೂ ಅನೇಕ ಹೆಸರಾಂತ / ಕೆಲವೊಮ್ಮೆ ಹೆಸರು ಸಹ ತಿಳಿಯದ ಕವಿಗಳ ಕವನಗಳ ಎಳೆಯನ್ನು ಹಿಡಿದು ನಮ್ಮ ಭಾಷೆ/ ಸಂಸ್ಕೃತಿಗೆ ಅನುವಾಗುವಂತೆ
ಹೊಂದಿಸಿಕೊಂಡು ರೂಪಾಂತರ ಮಾಡಿದ ಕವನಗಳು.ಇದಕ್ಕೆ ಕಾರಣ ಆ ಕವಿತೆಗಳ ಬಗೆಗಿನ ನನ್ನ ಸೆಳೆತ, ಅವುಗಳಲ್ಲಿದ್ದ ಸಂದೇಶಗಳೇ ಹೊರತು ಬೇರೆ ಏನೂ ಇಲ್ಲ. ಅದಕ್ಕೆಂದೇ ಇವು ' ಭಾವ- ಋಣ'- ಕವಿತೆಗಳು...
ನನ್ನೀ ಕಾರ್ಯದಲ್ಲಿ ಅನೇಕರು
ಅನೇಕ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ತಮಿಳು- ಕನ್ನಡ ಭಾಷೆಗಳ ಅನುವಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೆಸರು ಶ್ರೀ
K. ನಲ್ಲತಂಬಿಯವರದು. ನಾನು ಅವರನ್ನು ಒಂದೆರಡು ಸಲ ಭೇಟಿಯಾಗಿದ್ದರೂ ಸಾಹಿತ್ಯ ವಿಷಯಕ್ಕೆ
ಸಂಬಂಧಿಸಿ ಚರ್ಚೆಯಾದದ್ದಿಲ್ಲ. ಆದರೂ ನನ್ನ ಒಂದೇ ಒಂದು ವಿನಂತಿಗೆ
ಮನ್ನಣೆಯಿತ್ತು ,ಕವನಗಳನ್ನು ಓದಿ, ಸೂಕ್ತ ಸಲಹೆಗಳನ್ನು ಕೊಟ್ಟು ಅವುಗಳ ಬಗೆಗೆ ತಮ್ಮ ಅಭಿಪ್ರಾಯ ತಿಳಿಸಿದ ಅವರ ಉಪಕಾರ ಎಂದಿಗೂ ಸಹ ಮರೆಯದಂಥದು. ಒಮ್ಮೆ ಅದರ ಪ್ರತಿ
ಕೈ ಸೇರಿದ ಕೂಡಲೇ ಮುನ್ನುಡಿಗಾಗಿ ಹಿರಿಯ ಕನ್ನಡ ಲೇಖಕಿ ಶ್ರೀಮತಿ ಜಯಶ್ರೀ ದೇಶಪಾಂಡೆಯವರನ್ನು ವಿನಂತಿಸಿಕೊಂಡಾಗ ನನ್ನ ಆತ್ಯಂತ ಆತ್ಮೀಯ ಗೆಳತಿಯಾದ ಅವರೂ ಸಹ ಹೇಳಿದ ಸಮಯಕ್ಕೆ ಮುಂಚಿತ ವಾಗಿಯೇ ಮುನ್ನುಡಿ ಕೈ ಸೇರುವಂತೆ ನೋಡಿಕೊಂಡರು. ಪುಸ್ತಕದ ಮುಖ ಪುಟದ ಜವಾಬ್ದಾರಿ ರಾಷ್ಟ್ರೀಯ/ಅಂತರ್ ರಾಷ್ಟ್ರೀಯ ಮಟ್ಟದ ಖ್ಯಾತ ಕಲಾಕಾರ ಚಿತ್ರಮಿತ್ರ ಅವರದು.ಅವರ ಕುಂಚ ನನ್ನ ಕಲ್ಪನೆಯನ್ನೂ ಮೀರಿ ಕೆಲಸ ಮಾಡಿ ನನ್ನ ಸಂಕಲನದ ಆಶಯವನ್ನು ಶಬ್ದಗಳ ಹಂಗೇ ಇಲ್ಲದೇ, ಬರಿಯ ನೋಟಮಾತ್ರದಿಂದ ಗ್ರಹಿಸುವ ಷ್ಟರ ಮಟ್ಟಿಗೆ ಸಶಕ್ತಗೊಳಸಿದ್ದಾರೆ. ಇದಕ್ಕೆಲ್ಲ ಕುಂದಣವಿಟ್ಟಂತೆ ಕೊನೆಯ ಪುಟವನ್ನು ತಮ್ಮ ಅನಿಸಿಕೆಗಳ ಮೂಲಕವೇ ಬೆನ್ನುಡಿಯಾಗಿ ಅಂದಗೊಳಿಸಿದ ಶ್ರೀಮತಿ ಕಿರಣ ರಾಜನಹಳ್ಳಿಯವರದು ಬಹುಶ್ರುತ
ಹೆಸರು.ಚಿಕ್ಕ ವಯಸ್ಸಿನಿಂದಲೇ ಹಿರಿಯ ಸಾಧನೆಮಾಡಿ ಕರ್ನಾಟಕ ಸೇರಿದಂತೆ
ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಈ ಸಮಸ್ತ ಹಿರಿಯರ ಸಹಾಯ- ಸಹಕಾರ ಗಳಿಂದ ಇಂದು ನನ್ನ ಕನಸಿನ ಪುಸ್ತಕ ವೊಂದು ಪ್ರಕಟಗೊಳ್ಳುತ್ತಿದೆ.ಈ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
ನನ್ನ ನಾಲ್ಕನೇ ಪುಸ್ತಕ "ತುಂತುರು... ಇದು ನೀರ ಹಾಡು"- ಇದನ್ನು ಈ ಮೊದಲೇ ಅಂದವಾಗಿ ಮುದ್ರಿಸಿ ಕೊಟ್ಟ "ಮಹಿಮಾ ಪ್ರಕಾಶನ"ದ- ಮಾಲಿಕ ಶ್ರೀ ಶ್ರೀನಿವಾಸ ಅವರು ನನ್ನ ಈ ಪುಸ್ತಕದ ಮುದ್ರಣದ
ಹೊಣೆ ಹೊತ್ತು ಅಂದವಾಗಿ ಮುದ್ರಿಸಿ
ಸರಿಯಾದ ವೇಳೆಗೆ ನನ್ನ ಕೈಸೇರುವಂತೆ ಮಾಡಿದ್ದಾರೆ.
ಅಂದಮೇಲೆ ಈ ಪುಸ್ತಕದ ಶ್ರೇಯಸ್ಸು ಈ ಎಲ್ಲರಿಗೂ ಸಲ್ಲಲೇ ಬೇಕಾದ್ದು ನ್ಯಾಯ. ಅವರೆಲ್ಲರಿಗೂ ಮನಸಾ ವಂದಿಸಿ ಪುಸ್ತಕವನ್ನು ನಿಮ್ಮೆಲ್ಲರ ಓದಿಗಾಗಿ ಒದಗಿಸುತ್ತಿದ್ದೇನೆ.
ಮತ್ತೊಮ್ಮೆ ಪ್ರತ್ಯಕ್ಷವಾಗಿ/ ಪರೋಕ್ಷವಾಗಿ ನನಗೆ ಈ ಕೆಲಸದಲ್ಲಿ ಸಹಕರಿಸಿದ ಎಲ್ಲರಿಗೂ ಹೃದಯಾಳದ
ಕೃತಜ್ಞತೆಗಳು...
ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ ನನ್ನ ಹೃತ್ಪೂರ್ವಕ ನಮನಗಳು...